ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವ, ರಸ್ತೆ ಬದಿಯನ್ನೇ ಡಂಪಿಂಗ್ ಯಾರ್ಡ್ ಮಾಡಿಕೊಳ್ಳುವ ಸಾರ್ವಜನಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಬಿಗ್ ಶಾಕ್ ನೀಡಿದೆ. ಕೇವಲ ಬುದ್ಧಿಮಾತು, ಜಾಗೃತಿ ಅಥವಾ ಸಣ್ಣಪುಟ್ಟ ದಂಡಕ್ಕೆ ಕ್ಯಾರೇ ಅನ್ನದ ಜನರ ವಿರುದ್ಧ ಈಗ ನೇರವಾಗಿ ಪೊಲೀಸ್ ಕೇಸ್ ದಾಖಲಿಸಲು ಬಿಬಿಎಂಪಿ ಹಾಗೂ ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದರ ಮೊದಲ ಭಾಗವಾಗಿ, ನಗರದ ಕಸದ ಬ್ಲಾಕ್ ಸ್ಪಾಟ್‌ನಲ್ಲಿ ಮತ್ತೆ ತ್ಯಾಜ್ಯ ಎಸೆದು ಪುಂಡಾಟ ನಡೆಸಿದ ನಾಲ್ವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕ್ಲೀನ್ ಮಾಡಿ ಸೌಂದರ್ಯೀಕರಣಗೊಳಿಸಿದ ಜಾಗದಲ್ಲೇ ಮತ್ತೆ ಕಸ
ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಭಾಗದ ವಾರ್ಡ್ ಸಂಖ್ಯೆ 27ರ ಬಾಣಸವಾಡಿ 7ನೇ ಮುಖ್ಯರಸ್ತೆಯಲ್ಲಿದ್ದ ಕಸದ ‘ಬ್ಲಾಕ್ ಸ್ಪಾಟ್’ ಅನ್ನು ಪಾಲಿಕೆ ಸಿಬ್ಬಂದಿ ಇತ್ತೀಚೆಗಷ್ಟೇ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದರು. ಅಷ್ಟೇ ಅಲ್ಲದೆ, ಆ ರಸ್ತೆಗೆ ಸಾರ್ವಜನಿಕರು ಮತ್ತೆ ಕಸ ಹಾಕಬಾರದು ಎಂಬ ಉದ್ದೇಶದಿಂದ ಆ ಜಾಗವನ್ನು ರಂಗೋಲಿ, ಗಿಡಗಳನ್ನು ಇಟ್ಟು ಸೌಂದರ್ಯೀಕರಣಗೊಳಿಸಲಾಗಿತ್ತು . ಜೊತೆಗೆ ಸ್ಥಳೀಯರಿಗೆ ತಿಳಿವಳಿಕೆ ನೀಡಿ, ಅಲ್ಲಿ ಕಸ ಎಸೆಯದಂತೆ ಎಚ್ಚರಿಕೆ ಫಲಕಗಳನ್ನೂ ಹಾಕಲಾಗಿತ್ತು.
ರಾತ್ರಿ ಪಾಳಿಯಲ್ಲಿ ಮಾರ್ಷಲ್‌ಗಳ ಗಸ್ತು: ಕಸ ಎಸೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು
ಇಷ್ಟೆಲ್ಲಾ ಮಾಡಿದರೂ ಕೆಲವರ ಬುದ್ಧಿ ಮಾತ್ರ ಬದಲಾಗಿರಲಿಲ್ಲ. ಸೌಂದರ್ಯೀಕರಣಗೊಳಿಸಿದ ಜಾಗದಲ್ಲೇ ಮತ್ತೆ ಕಸ ಎಸೆಯುವ ಕಿಡಿಗೇಡಿಗಳ ಮೇಲೆ ಕಣ್ಣಿಡಲು ವಾರ್ಡ್ ಮಾರ್ಷಲ್‌ಗಳನ್ನು ನಿಯೋಜಿಸಲಾಗಿತ್ತು. ಅದರಂತೆ, ಜುಲೈ 16ರಂದು ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದ ಮಾರ್ಷಲ್‌ಗಳಿಗೆ ನಾಲ್ವರು ವ್ಯಕ್ತಿಗಳು ಬೈಕ್ ಹಾಗೂ ಕಾರುಗಳಲ್ಲಿ ಬಂದು ಅದೇ ಸ್ಥಳದಲ್ಲಿ ಅನಧಿಕೃತವಾಗಿ ಕಸದ ಚೀಲಗಳನ್ನು ಬಿಸಾಡುತ್ತಿರುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದಂಡ ಪಾವತಿಗೆ ನಿರಾಕರಣೆ
ಕಸ ಬಿಸಾಡಿದ್ದನ್ನು ತಕ್ಷಣವೇ ಗಮನಿಸಿದ ಮಾರ್ಷಲ್‌ಗಳು, ಆ ವ್ಯಕ್ತಿಗಳನ್ನು ತಡೆದು ನಿಲ್ಲಿಸಿ ನಿಯಮಾವಳಿಗಳ ಪ್ರಕಾರ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ, ತಪ್ಪು ಮಾಡಿಯೂ ತಪ್ಪೊಪ್ಪಿಕೊಳ್ಳದ ಆ ನಾಲ್ವರು ಸಾರ್ವಜನಿಕರು ಮಾರ್ಷಲ್‌ಗಳ ಜೊತೆ ಉದ್ಧಟತನದಿಂದ ವರ್ತಿಸಿದ್ದಾರೆ. ನಾವು ದಂಡ ಕಟ್ಟುವುದಿಲ್ಲ ಎಂದು ರಂಪಾಟ ಮಾಡಿ, ತಂದಿದ್ದ ಕಸವನ್ನು ಮತ್ತೆ ಅದೇ ಜಾಗಕ್ಕೆ ಬಿಸಾಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಖಡಕ್ ದೂರು ನೀಡಿದ ಅಧಿಕಾರಿಗಳು: ಬಾಣಸವಾಡಿ ಠಾಣೆಯಲ್ಲಿ FIR ಬುಕ್
ಕಸ ಹಾಕಿದ್ದಲ್ಲದೇ ಮಾರ್ಷಲ್‌ಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ದಂಡ ತೆರಲು ನಿರಾಕರಿಸಿದ್ದನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸರ್ವಜ್ಞನಗರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ತಕ್ಷಣವೇ ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಕೃತ್ಯ ಎಸಗಿದ ನಾಲ್ವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 280 ರಡಿ (ಸಾರ್ವಜನಿಕ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಧಕ್ಕೆ) ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲೇ ಮೊದಲ ಬಾರಿಗೆ ಕ್ರಿಮಿನಲ್ ಕೇಸ್: ಜಿಬಿಎ ನೀಡಿದೆ ಲಾಸ್ಟ್ ವಾರ್ನಿಂಗ್
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಮಾರ್ಷಲ್‌ಗಳು ಸಣ್ಣಪುಟ್ಟ ದಂಡ ಹಾಕಿ ಬಿಟ್ಟುಬಿಡುತ್ತಿದ್ದರು. ಆದರೆ, ಕಸದ ಬ್ಲಾಕ್ ಸ್ಪಾಟ್ ತೆರವುಗೊಳಿಸಿ ಸ್ವಚ್ಛಗೊಳಿಸಿದ ಜಾಗದಲ್ಲಿ ಮತ್ತೆ ಕಸ ಬಿಸಾಡಿದ್ದಕ್ಕೆ ಬೆಂಗಳೂರಿನಲ್ಲಿ ಇಷ್ಟೊಂದು ಕಠಿಣವಾಗಿ ಎಫ್‌ಐಆರ್ ದಾಖಲಿಸಿರುವುದು ಇದೇ ಮೊದಲು! ಈ ಮೂಲಕ ಎಲ್ಲೆಂದರಲ್ಲಿ ತ್ಯಾಜ್ಯ ಚೆಲ್ಲಿ ನಗರದ ನೈರ್ಮಲ್ಯ ಹಾಳು ಮಾಡುವವರಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಧಕ್ಕೆ ತರುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಮುಂದಿನ ದಿನಗಳಲ್ಲಿ ತನಿಖೆ ತೀವ್ರ: ‘ಸಿಟಿ ಕ್ಲೀನ್’ಗೆ ಬಿಗಿ ನಿಯಮ
ಈ ಎಫ್‌ಐಆರ್ ಬೆನ್ನಲ್ಲೇ ಬಾಣಸವಾಡಿ ಪೊಲೀಸರು ಕಸ ಬಿಸಾಡಿದ ನಾಲ್ವರನ್ನೂ ವಿಚಾರಣೆಗೆ ಕರೆಸಲು ಸಮನ್ಸ್ ನೀಡಿದ್ದು, ಕಾನೂನು ತನಿಖೆ ಮುಂದುವರಿದಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಕಸದ ಬ್ಲಾಕ್ ಸ್ಪಾಟ್‌ಗಳನ್ನು ಇಲ್ಲದಂತೆ ಮಾಡಲು ಈ ರೀತಿಯ ಖಡಕ್ ಆಕ್ಷನ್ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ಮುಂದೆ ರಾತ್ರಿ ವೇಳೆಯಲ್ಲಿ ಕಸ ಎಸೆದರೂ ಸಿಸಿಟಿವಿ ಮತ್ತು ಮಾರ್ಷಲ್‌ಗಳ ಮೂಲಕ ಪತ್ತೆ ಹಚ್ಚಿ ನೇರ ಕೇಸ್ ಹಾಕ್ತೇವೆ ಎಂದು ಜಿಬಿಎ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಹುಷಾರಾಗಿರಬೇಕಿದೆ.



