No menu items!
13.7 C
Munich
Monday, May 11, 2026

ಮೆ 15ರ ನಂತರ ಹೆಚ್ಚಾಗಲಿದೆಯಾ ಪೆಟ್ರೋಲ್-ಡಿಸೇಲ್ ಬೆಲೆ ? ಪರೋಕ್ಷವಾಗಿ ಸುಳಿವು ನೀಡಿದ್ರಾ ಮೋದಿ ?

Must read

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಈಗ ಯುದ್ಧದ ಕಿಚ್ಚು ಹೊತ್ತಿಕೊಂಡಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಕೇವಲ ಎರಡು ದೇಶಗಳ ನಡುವಿನ ಕಿತ್ತಾಟದಿಂದ, ನೇರವಾಗಿ ಭಾರತೀಯರ ಜೇಬಿಗೆ ಕತ್ತರಿ ಬೀಳಲಿದೆಯಾ ಎಂಬ ಬಡ ಮತ್ತು ಭಯ ಮಧ್ಯಮ ವರ್ಗದವರನ್ನು ಕಾಡುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರುತ್ತಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 105 ರಿಂದ 126 ಡಾಲರ್ ದಾಟಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಅನಿವಾರ್ಯ ಘಟ್ಟ ಈಗ ಹತ್ತಿರ ಬಂದತೆ ಇದೆ.

ಈ ಕರಾಳ ಆರ್ಥಿಕ ಪರಿಸ್ಥಿತಿಯನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಒಂದು ಖಡಕ್ ಕಿವಿಮಾತು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚಾಗಿ ಬಳಸಿ ಎಂದು ಕರೆ ನೀಡಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ಕಾಲದಂತೆ ಮತ್ತೆ ವರ್ಕ್ ಫ್ರಮ್ ಹೋಮ್ ಮತ್ತು ಆನ್‌ಲೈನ್ ಮೀಟಿಂಗ್‌ಗಳನ್ನು ರೂಢಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದು ಕೇವಲ ಸಲಹೆಯಲ್ಲ, ಮುಂಬರುವ ಬೆಲೆ ಏರಿಕೆಯ ಆಘಾತಕ್ಕೆ ಸಿದ್ಧರಾಗಿ ಎಂಬ ಪರೋಕ್ಷ ಮುನ್ನೆಚ್ಚರಿಕೆ.

ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇಡೀ ಪರಿಸ್ಥಿತಿಯನ್ನು ಹದಗೆಡಿಸಿದೆ. ತೈಲ ಕಂಪನಿಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರಕ್ಕೆ ಈಗ ಬೆಲೆ ಏರಿಕೆ ಮಾಡುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲದಂತಾಗಿದೆ. ಮೂಲಗಳ ಪ್ರಕಾರ, ಮೇ 15ರ ನಂತರ ದೇಶದಲ್ಲಿ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ಕಾಣದ ಅತಿದೊಡ್ಡ ಬೆಲೆ ಏರಿಕೆ ಎನ್ನಲಾಗುತ್ತಿದೆ.

ಹಾಗಾದರೆ ಬೆಲೆ ಎಷ್ಟು ಏರಬಹುದು? ಆರ್ಥಿಕ ತಜ್ಞರ ಲೆಕ್ಕಾಚಾರದ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ 4 ರಿಂದ 5 ರೂಪಾಯಿಯಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಡುಗೆ ಅನಿಲ ಅಥವಾ ಎಲ್‌ಪಿಜಿ (LPG) ದರವೂ ಗ್ರಾಹಕರಿಗೆ ಶಾಕ್ ನೀಡಲಿದ್ದು, ಪ್ರತಿ ಸಿಲಿಂಡರ್ ಬೆಲೆ 40 ರಿಂದ 50 ರೂಪಾಯಿಯಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಒಂದೇ ಬಾರಿಗೆ ಬೆಲೆ ಏರಿಸಿದರೆ ಹಣದುಬ್ಬರ ಮಿತಿಮೀರುವ ಆತಂಕವಿರುವುದರಿಂದ, ಸರ್ಕಾರ ಹಂತ ಹಂತವಾಗಿ ದರ ಹೆಚ್ಚಿಸುವ ‘ಸೇಫ್ ಗೇಮ್’ ಆಡಬಹುದು ಎಂಬ ಸುಳಿವು ಸಿಕ್ಕಿದೆ.

ಪ್ರಧಾನಿ ಮೋದಿ ಅವರು ಕೇವಲ ಇಂಧನ ಉಳಿತಾಯದ ಬಗ್ಗೆ ಮಾತ್ರವಲ್ಲದೆ, ದೇಶದ ವಿದೇಶಿ ವಿನಿಮಯವನ್ನು ಉಳಿಸುವ ಬಗ್ಗೆಯೂ ಒತ್ತಿ ಹೇಳಿದ್ದಾರೆ. ನಾವು ಎಷ್ಟು ಹೆಚ್ಚು ಪೆಟ್ರೋಲ್ ಬಳಸುತ್ತೇವೆಯೋ ಅಷ್ಟು ಹೆಚ್ಚು ವಿದೇಶಿ ಹಣ ಆಮದು ರೂಪದಲ್ಲಿ ಹೊರಹೋಗುತ್ತದೆ. ಇದನ್ನು ತಡೆಯಲು ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೆ ಖಾಸಗಿ ವಾಹನ ಬಿಟ್ಟು ಬಸ್ ಅಥವಾ ಮೆಟ್ರೋ ಬಳಸಬೇಕು, ರಾಸಾಯನಿಕ ಗೊಬ್ಬರ ಬಳಕೆ ತಗ್ಗಿಸಬೇಕು ಮತ್ತು ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ಬಳಸಬಾರದು ಎಂದು ಅವರು ಜನರಲ್ಲಿ ವಿನಂತಿಸಿದ್ದಾರೆ.

ಭಾರತವು ತನ್ನ ಹೆಚ್ಚಿನ ತೈಲ ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಕನಿಷ್ಠ 100 ಡಾಲರ್ ಗಡಿ ದಾಟಿದರೂ ನಮ್ಮ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ. ಈಗಿನ ಯುದ್ಧದ ವಾತಾವರಣ ತಕ್ಷಣ ಸುಧಾರಿಸುವ ಲಕ್ಷಣಗಳಿಲ್ಲ. ಹೀಗಾಗಿ, ದರ ಏರಿಕೆ ಬಹುತೇಕ ಖಚಿತವಾಗಿದ್ದು, ಮೇ ಮಧ್ಯಭಾಗದಲ್ಲಿ ವಾಹನ ಸವಾರರು ಜೇಬಿಗೆ ಹೆಚ್ಚಿನ ಹೊರೆ ಹೊತ್ತುಕೊಳ್ಳಲು ಮಾನಸಿಕವಾಗಿ ಸಿದ್ಧರಾಗಬೇಕಿದೆ.

- Advertisement -spot_img

More articles

- Advertisement -spot_img

Latest article