ಸದಾ ತಮ್ಮ ವಿಭಿನ್ನ ಹೇಳಿಕೆಗಳ ಮೂಲಕವೇ ರಾಜ್ಯ ರಾಜಕಾರಣದಲ್ಲಿ ಸೆನ್ಸೇಷನ್ ಸೃಷ್ಟಿಸುವ ಹಿರಿಯ ರಾಜಕಾರಣಿ, ಸಾಹಿತ್ಯ ರತ್ನ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಸುತ್ತ ಈಗ ಭೀಕರ ಕಾನೂನು ಸಂಕಷ್ಟವೊಂದು ಸುತ್ತಿಕೊಂಡಿದೆ. ಸಾಲವಾಗಿ ಪಡೆದಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಾಪಸ್ ಕೇಳಲು ಹೋದ ವ್ಯಕ್ತಿಯ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ತಲೆಗೆ ಹೊಡೆದು ಹಲ್ಲೆ ನಡೆಸಿದ ಗಂಭೀರ ಆರೋಪ ಎಂಎಲ್‌ಸಿ ವಿಶ್ವನಾಥ್ ವಿರುದ್ಧ ಕೇಳಿಬಂದಿದೆ. ಈ ಹೈಪ್ರೊಫೈಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಹೆಚ್. ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿಶ್ವನಾಥ್ ಅವರ ವಿರುದ್ಧ ಈ ಗಂಭೀರ ದೂರು ನೀಡಿ ಕೋರ್ಟ್‌ನಿಂದ ಎಫ್‌ಐಆರ್ ಹಾಕಿಸಿರುವುದು ಬೇರೆ ಯಾರೂ ಅಲ್ಲ, ಮೈಸೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು. ತಮ್ಮದೇ ಪಕ್ಷದ ಮಾಜಿ ಹಿರಿಯ ನಾಯಕನ ವಿರುದ್ಧ ಮಹದೇವು ತಿರುಗಿಬಿದ್ದಿದ್ದು, ವಿಶ್ವನಾಥ್ ಅವರು ನನ್ನಿಂದ ₹55 ಲಕ್ಷ ಹಣವನ್ನು ಸಾಲವಾಗಿ ಪಡೆದು ವರ್ಷಗಳಿಂದ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ ಹಣ ಕೇಳಲು ಹೋದರೆ ಅಧಿಕಾರದ ಮದದಿಂದ ನನ್ನ ಮೇಲೆಯೇ ಕೈ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅಸಲಿಗೆ ಈ ಕಥೆ ಶುರುವಾಗಿದ್ದು ಬರೋಬ್ಬರಿ 13 ವರ್ಷಗಳ ಹಿಂದೆ, ಅಂದರೆ 2013 ರಲ್ಲಿ. ಆಗ ಹೆಚ್. ವಿಶ್ವನಾಥ್ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಆ ಸಮಯದಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಎಂಟಿಬಿ ನಾಗರಾಜ್ ಅವರ ಮುಖಾಂತರ ಕೋಟೆಹುಂಡಿ ಮಹದೇವು ಅವರು ಹೆಚ್. ವಿಶ್ವನಾಥ್ ಹಾಗೂ ಅವರ ಮಗ ಅಮಿತ್ ದೇವರಹಟ್ಟಿ ಅವರಿಗೆ ಬರೋಬ್ಬರಿ 55 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ನೀಡಿದ್ದರು ಎನ್ನಲಾಗಿದೆ. ಆದರೆ ವರ್ಷಗಳು ಕಳೆದರೂ ವಿಶ್ವನಾಥ್ ಪಡೆದ ಹಣವನ್ನು ಮಾತ್ರ ವಾಪಸ್ ನೀಡದೆ ಸತಾಯಿಸುತ್ತಲೇ ಬಂದಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಎಂಎಲ್‌ಸಿ ವಿಶ್ವನಾಥ್ ತಂಗಿದ್ದರು. ಈ ವಿಷಯ ತಿಳಿದು ಕೋಟೆಹುಂಡಿ ಮಹದೇವು ಅವರು ತಮ್ಮ ಹಳೇ ಸಾಲದ ಹಣವನ್ನು ವಾಪಸ್ ಕೇಳಲು ಅಲ್ಲಿಗೆ ಹೋಗಿದ್ದಾರೆ. ಆಗ ದುಡ್ಡು ಕೊಡುವ ಬದಲು ಕೆರಳಿದ ವಿಶ್ವನಾಥ್, ಮಹದೇವು ಅವರ ತಾಯಿ ಮತ್ತು ಹೆಂಡತಿಯ ಬಗ್ಗೆ ಅತಿ ಕೀಳಾಗಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಕೈಯಿಂದ ಅವರ ತಲೆಗೆ ಜೋರಾಗಿ ಹೊಡೆದು ಜಲದರ್ಶಿನಿ ಗೆಸ್ಟ್ ಹೌಸ್‌ನಿಂದ ಆಚೆ ತಳ್ಳಿದ್ದಾರೆ ಎಂಬುದು ದೂರಿನ ಅಸಲಿ ಸಾರಾಂಶ.
ಈ ಘಟನೆ ನಡೆದ ತಕ್ಷಣವೇ ಕೋಟೆಹುಂಡಿ ಮಹದೇವು ದೇವರಾಜ ಪೊಲೀಸ್ ಠಾಣೆಗೆ ಓಡಿಹೋಗಿ ಎನ್‌ಸಿಆರ್ ದಾಖಲಿಸಿದ್ದರು. ಆದರೆ ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್‌ಐಆರ್ ದಾಖಲಿಸಿರಲಿಲ್ಲ. ಇದರಿಂದ ಧೃತಿಗೆಡದ ಮಹದೇವು ಸೀದಾ ಮೈಸೂರಿನ ಘನ ನ್ಯಾಯಾಲಯದ ಮೊರೆ ಹೋಗಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿ ಕೋರ್ಟ್ ಮೂಲಕವೇ ಪೊಲೀಸರಿಗೆ ಆದೇಶ ತಂದು ಕೊನೆಗೂ ಎಫ್‌ಐಆರ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಿವಾದದ ಕುರಿತು ಮೈಸೂರಿನಲ್ಲಿ ಮಾಧ್ಯಮಗಳಿಗೆ ಭಾವುಕರಾಗಿ ಪ್ರತಿಕ್ರಿಯಿಸಿರುವ ಕೋಟೆಹುಂಡಿ ಮಹದೇವು, ವಿಶ್ವನಾಥ್ ಅವರು ನನಗೆ ಮಾಡಬಾರದ ಅನ್ಯಾಯ ಮಾಡಿದ್ದಾರೆ. ಈ ವಯಸ್ಸಿನಲ್ಲಿ ನನ್ನ ಹೆಂಡ್ತಿ, ತಾಯಿ ಬಗ್ಗೆ ಅಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ. ಅವರಿಗಾಗಿ ನಾನು ಆಸ್ತಿಯನ್ನು ಅಡಮಾನ ಇಟ್ಟು ಸಾಲ ತಂದುಕೊಟ್ಟಿದ್ದೆ. ಇಂದು ಬಡ್ಡಿ ಬೆಳೆದು ಕೋಟ್ಯಂತರ ರೂಪಾಯಿ ಆಗಿದೆ. ನನ್ನ ಅಕ್ಕ ತಂಗಿಯರು ನನ್ನ ಮೇಲೆಯೇ ಕೇಸ್ ಹಾಕಿದ್ದಾರೆ. ವಿಶ್ವನಾಥ್ ತಾವು ನಿಜವಾದ ಸತ್ಯವಂತರಾಗಿದ್ದರೆ ಮೈಸೂರು ಚಾಮುಂಡೇಶ್ವರಿ ತಾಯಿ ಸನ್ನಿಧಿಗೆ ಬಂದು ಆಣೆ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಇದೇ ಹೊತ್ತಿನಲ್ಲಿ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿರುವವರ ವಿರುದ್ಧವೂ ಮಹದೇವು ಆಕ್ರೋಶ ಹೊರಹಾಕಿದ್ದಾರೆ. ನಾನು ಕಾಂಗ್ರೆಸ್‌ನಲ್ಲೇ ಉಳಿದಿದ್ದಕ್ಕೆ ನನ್ನನ್ನು ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎನ್ನುತ್ತಾರೆ. ಆದರೆ ಈ ವೈಯಕ್ತಿಕ ಸಾಲದ ಹಣದ ಪ್ರಕರಣಕ್ಕೂ ಸಿಎಂ ಸಿದ್ದರಾಮಯ್ಯ ಅಥವಾ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಎಂಟಿಬಿ ನಾಗರಾಜ್ ಎದುರೇ ಹಣ ಕೈಬದಲಾಗಿದೆ. ವಿಶ್ವನಾಥ್ ನನ್ನ ಹಣ ಕೊಡಲೇಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಹಿರಿಯ ಮುಖಂಡನ ಮೇಲೆಯೇ ಹಲ್ಲೆ ಮತ್ತು ವಂಚನೆ ಕೇಸ್ ದಾಖಲಾಗಿರುವುದರಿಂದ ಮೈಸೂರು ಪೊಲೀಸರು ವಿಶ್ವನಾಥ್ ಅವರಿಗೆ ನೋಟಿಸ್ ನೀಡಲು ಸಜ್ಜಾಗಿದ್ದು, ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದೆ.



