ತಮಿಳುನಾಡು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ವಿಜಯ್ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಕರೂರ್ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ನೀಡಲಾಗಿದ್ದ ಸರ್ಕಾರಿ ಉದ್ಯೋಗ ಆದೇಶಗಳನ್ನು ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಸರ್ಕಾರದ ಈ ಏಕಪಕ್ಷೀಯ ನಿರ್ಧಾರಕ್ಕೆ ಬ್ರೇಕ್ ಹಾಕಿರುವ ನ್ಯಾಯಾಲಯ, ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದಿದೆ. ಈ ಮೂಲಕ ”ಜನನಾಯಗನ್” ವಿಜಯ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
ಆರ್ಟಿಕಲ್ 14, 16 ಉಲ್ಲಂಘನೆ: ‘ಮಹಾದ್ವಾರ’ ತೆರೆದಂತೆ ಎಂದ ಹೈಕೋರ್ಟ್
ಸಾಮಾಜಿಕ ಕಾರ್ಯಕರ್ತರು, ನಾಮ್ ತಮಿಳರ್ ಪಕ್ಷ ಹಾಗೂ ಮಜಲಗವ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಸರ್ಕಾರದ ಈ ಕ್ರಮವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಹಾಗೂ ವಿಧಿ 16 (ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ) ಅನ್ನು ಉಲ್ಲಂಘಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಘಟನೆ ನಡೆದ ತಕ್ಷಣ ರಾಜಕೀಯ ನಿರ್ಧಾರಗಳ ಮೂಲಕ ನಿಯಮ ಗಾಳಿಗೆ ತೂರಿ ಉದ್ಯೋಗ ಹಂಚುವುದು ತಪ್ಪು. ಹೀಗೆ ಮಾಡಿದರೆ ನಾಳೆ ದಿನ ಅಪಘಾತದಲ್ಲಿ ಮೃತಪಟ್ಟವರೆಲ್ಲರ ಕುಟುಂಬಸ್ಥರೂ ಸರ್ಕಾರಿ ಕೆಲಸ ಕೇಳಲು ಬಾಗಿಲು ತೆರೆದಂತೆ ಆಗುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಬಸ್ ಆಕ್ಸಿಡೆಂಟ್‌ನಲ್ಲಿ ಸತ್ತವರಿಗೂ ಕೆಲಸ ಕೊಡ್ತೀರಾ? ನ್ಯಾಯಾಧೀಶರ ಖಾರವಾದ ಪ್ರಶ್ನೆ
ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ಕರೂರ್ ದುರಂತದ ಸಂತ್ರಸ್ತರಿಗೆ ಕೆಲಸ ಕೊಡೋದಾದ್ರೆ, ಸರ್ಕಾರಿ ಬಸ್ ಅಪಘಾತಗಳಲ್ಲಿ ಸಾಯುವವರ ಕುಟುಂಬಸ್ಥರಿಗೂ ಕೆಲಸ ಕೊಡ್ತೀರಾ? ಶಿವಕಾಶಿಯಲ್ಲಿ ಆಗಾಗ ನಡೆಯುವ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವರಿಗೆ ಏನು ಮಾಡ್ತೀರಾ? ರಾಜ್ಯದಲ್ಲಾಗುವ ಪ್ರತಿಯೊಂದು ದುರಂತಕ್ಕೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವೇ? ಎಂದು ಸರಣಿ ಪ್ರಶ್ನೆಗಳನ್ನು ಎಸೆದು, TNPSC ಗ್ರೂಪ್ 4 ಹುದ್ದೆಗಳ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ.
ಲಕ್ಷಾಂತರ ನಿರುದ್ಯೋಗಿಗಳಿಗೆ ಮಾಡಿದ ದ್ರೋಹ: ರೊಚ್ಚಿಗೆದ್ದಿದ್ದ AIADMK ನಾಯಕರು
ಸಿಎಂ ವಿಜಯ್ ಇತ್ತೀಚೆಗೆ ಕರೂರಿಗೆ ಭೇಟಿ ನೀಡಿ 32 ಕುಟುಂಬಗಳಿಗೆ ಅನುಕಂಪದ ನೇಮಕಾತಿ ಪತ್ರ ವಿತರಿಸಿದ್ದನ್ನು ವಿಪಕ್ಷ ಎಐಎಡಿಎಂಕೆ ಕಟುವಾಗಿ ವಿರೋಧಿಸಿತ್ತು. ಹಿರಿಯ ನಾಯಕ ಆರ್.ಬಿ. ಉದಯಕುಮಾರ್, ರಾಜ್ಯದಲ್ಲಿ ಲಕ್ಷಾಂತರ ಯುವಜನರು ಕಷ್ಟಪಟ್ಟು ಟಿಎನ್‌ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ವಿಜಯ್ ತಮ್ಮ ರಾಜಕೀಯ ಮೈಲೇಜ್‌ಗಾಗಿ ನೇಮಕಾತಿ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ ಉದ್ಯೋಗ ಹಂಚುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಈಗ ಕೋರ್ಟ್ ತೀರ್ಪಿನಿಂದಾಗಿ ವಿಪಕ್ಷಗಳ ಆರೋಪಕ್ಕೆ ಬಲ ತಂದಿದೆ.
ಉದ್ಯೋಗ ಬೇಡ, ಕೌಶಲ್ಯ ತರಬೇತಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಸಲಹೆ
ಪರಿಹಾರವಾಗಿ ನೇರವಾಗಿ ಸರ್ಕಾರಿ ಹುದ್ದೆಗಳನ್ನು ಕೊಡುವ ಬದಲು, ಮೃತರ ಕುಟುಂಬಸ್ಥರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಾಯ ಮಾಡಬಹುದು ಎಂದು ಹೈಕೋರ್ಟ್ ಪೀಠ ಸಲಹೆ ನೀಡಿದೆ. ಅರ್ಹ ಅಭ್ಯರ್ಥಿಗಳನ್ನು ಬದಿಗೊತ್ತಿ, ಈ ರೀತಿ ವಿಶೇಷ ರಿಯಾಯಿತಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
41 ಜೀವ ಬಲಿ ಪಡೆದಿದ್ದ ಕರೂರ್ ಕಾಲ್ತುಳಿತ: ಏನಿದು ಭೀಕರ ದುರಂತ?
ಕಳೆದ ವರ್ಷ ಸೆಪ್ಟೆಂಬರ್ 27ರಂದು ಟಿವಿಕೆ (TVK) ಅಧ್ಯಕ್ಷ ವಿಜಯ್ ನಡೆಸಿದ್ದ ಬೃಹತ್ ರಾಜಕೀಯ ರ‍್ಯಾಲಿಯಲ್ಲಿ ಸಾಮರ್ಥ್ಯಕ್ಕೂ ಮೀರಿ ಜನಸ್ತೋಮ ಹರಿದುಬಂದಿತ್ತು. ನಿಯಂತ್ರಣ ಸಿಗದೇ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮಕ್ಕಳು ಸೇರಿದಂತೆ ಒಟ್ಟು 41 ಜನರು ಪ್ರಾಣ ಕಳೆದುಕೊಂಡಿದ್ದರು. ಆಡಳಿತಾರೂಢ ಡಿಎಂಕೆ ಹಾಗೂ ಪೊಲೀಸರ ಗೃಹ ಇಲಾಖೆ ವೈಫಲ್ಯದಿಂದಲೇ ದುರಂತ ಸಂಭವಿಸಿದೆ ಎಂದು ಟಿವಿಕೆ ಆರೋಪಿಸಿದ್ದರೆ, ಮೂಲಭೂತ ಸೌಕರ್ಯಗಳ ಕೊರತೆಯೇ ಕಾರಣ ಎಂದು ಪೊಲೀಸರು ವರದಿ ನೀಡಿದ್ದರು. ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ನಡೆಸುತ್ತಿದೆ.
ವಿಜಯ್ ರಾಜಕೀಯ ಹಾದಿಗೆ ಹಿನ್ನಡೆ ತಂದ ತೀರ್ಪು
ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸಿಎಂ ಪೀಠಕ್ಕೇರಿದ ವಿಜಯ್, ತಮ್ಮ ಮೊದಲ ಕರೂರ್ ಭೇಟಿಯಲ್ಲೇ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿ ಆರ್ಥಿಕ ಭದ್ರತೆ ನೀಡಲು ಈ ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಹೈಕೋರ್ಟ್‌ನಿಂದ ಇಂತಹದೊಂದು ಚಾಟಿಯೇಟು ತಿಂದಿರುವುದು ವಿಜಯ್ ಸರ್ಕಾರದ ಆಡಳಿತ ಶೈಲಿ ಹಾಗೂ ಕಾನೂನು ಪರಿಣತಿಯ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ.



