ಐಟಿ ಸಿಟಿ ಬೆಂಗಳೂರಿನಲ್ಲಿ ದಿನಕ್ಕೊಂದು ನಕಲಿ ದಂದೆಗಳು ಬಯಲಾಗುತ್ತಲೇ ಇರುತ್ತವೆ. ಇದಕ್ಕೆ ಇನ್ನೊಂದು ಪುರಾವೆ ಎಂಬಂತೆ ಜನರ ಸಹಾನುಭೂತಿ ಮತ್ತು ಹೃದಯ ವೈಶಾಲ್ಯತೆಯನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿದ್ದ ಖತರ್ನಾಕ್ ಖಿಲಾಡಿಯೊಬ್ಬ ಈಗ ಸಿಕ್ಕಿಬಿದ್ದಿದ್ದಾನೆ. ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುತ್ತಾ, ಜನರ ಕಣ್ಣಿಗೆ ಮಣ್ಣೆರಚಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಉತ್ತರ ಪ್ರದೇಶ ಮೂಲದ ಖದೀಮನೊಬ್ಬನ ಕಳ್ಳಾಟವನ್ನು ಸ್ಥಳೀಯರು ಹಿಡಿದು ಜಾಲಾಡಿದ್ದಾರೆ.
ನಗರದ ಬೈಯತರಾಯನಪುರ ಸಮೀಪದ ಐಟಿಐ ಲೇಔಟ್ ಭಾಗದಲ್ಲಿ ಈ ಕಳ್ಳಾಟ ಬಯಲಾಗಿದ್ದು, ಉತ್ತರ ಪ್ರದೇಶದಿಂದ ಉದ್ಯೋಗಕ್ಕಾಗಿ ಬರುವ ನೆಪದಲ್ಲಿ ಬೆಂಗಳೂರಿಗೆ ಬಂದಿದ್ದ ‘ಮುಕೇಶ್’ ಎಂಬಾತ, ಕೈಕಾಲು ನೆಟ್ಟಗಿದ್ದರೂ ಊರುಗೋಲು (Walking Stick) ಹಿಡಿದು ಅಂಗವಿಕಲನಂತೆ ರಸ್ತೆಯಲ್ಲಿ ಕುಂಟುತ್ತಾ ಸಾಗುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಕರುಣಾಜನಕವಾಗಿ ಮುಖವಿಟ್ಟುಕೊಂಡು ಸಾರ್ವಜನಿಕರ ಬಳಿ ಹಣ ಬೇಡುತ್ತಿದ್ದ ಈತನ ಬಣ್ಣ ಕೊನೆಗೂ ಬಯಲಾಗಿದೆ.
ಊರುಗೋಲು ಬಿಸಾಕಿ ಕಾಲ್ತೆಗೆದ ಖದೀಮ
ಈತನ ವಿಚಿತ್ರ ನಡವಳಿಕೆ ಹಾಗೂ ಚಲನವಲನದ ಮೇಲೆ ಅನುಮಾನಗೊಂಡ ಸ್ಥಳೀಯರು ಆತನನ್ನು ತಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಗಾಬರಿಯಾದ ಮುಕೇಶ್, ತಾನು ಹಿಡಿದಿದ್ದ ಊರುಗೋಲನ್ನು ರಸ್ತೆಯಲ್ಲೇ ಬಿಸಾಕಿ, ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಓಡಲು ಶುರುಮಾಡಿದ್ದಾನೆ. ಶೋಕಿ ಜೀವನಕ್ಕಾಗಿ ಅಂಗವಿಕಲನಂತೆ ನಾಟಕವಾಡುತ್ತಿದ್ದದ್ದು ಮಾತ್ರವಲ್ಲದೆ, ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕದಿಯುತ್ತಿದ್ದದ್ದನ್ನು ಆತ ಒಪ್ಪಿಕೊಂಡಿದ್ದಾನೆ.
ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ಬೀಳುವ ಭಯದಲ್ಲಿದ್ದ ಮುಕೇಶ್, ನೆಟ್ಟಗೆ ನಿಂತು ಕೈಜೋಡಿಸಿ ಕ್ಷಮೆಯಾಚಿಸಿದ್ದಾನೆ. ಸದ್ಯ ಸ್ಥಳೀಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಈತನ ಕಳ್ಳಾಟದ ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನಾಕ್ರೋಶಕ್ಕೆ ಕಾರಣವಾಗಿವೆ. ಹೆತ್ತ ತಂದೆ-ತಾಯಿ ಕೊಟ್ಟ ದೇಹ ನೆಟ್ಟಗಿದ್ದರೂ, ಕಷ್ಟಪಟ್ಟು ದುಡಿಯುವ ಬದಲು ಈ ರೀತಿ ಜನರನ್ನು ಯಾಮಾರಿಸಿ ಭಿಕ್ಷೆ ಬೇಡುವುದು ಮತ್ತು ಕಳ್ಳತನ ಮಾಡಿರುವುದು ಕನ್ನಡಿಗರನ್ನು ಮಾತ್ರವಲ್ಲದೇ ದೇಶವ್ಯಾಪಿ ಹಲವರನ್ನು ಕೆರಳಿಸಿದೆ.
ಮತ್ತೆ ಮುನ್ನೆಲೆಗೆ ಬಂತು ನಕಲಿ ಭಿಕ್ಷಾಟನೆ ಜಾಲ
ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳು, ಬಸ್ ನಿಲ್ದಾಣಗಳು ಮತ್ತು ದೇವಸ್ಥಾನಗಳ ಮುಂದೆ ನಕಲಿ ಅಂಗವೈಕಲ್ಯ ಹಾಗೂ ಕಾಯಿಲೆಗಳ ನೆಪ ಹೇಳಿ ಭಿಕ್ಷೆ ಬೇಡುವ ದೊಡ್ಡ ಜಾಲವೇ ಸಕ್ರಿಯವಾಗಿದೆ ಎಂಬ ಅನುಮಾನಕ್ಕೆ ಈ ಘಟನೆ ಪುಷ್ಟಿ ನೀಡಿದೆ. ಉತ್ತರ ಭಾರತದ ಹಲವು ರಾಜ್ಯಗಳಿಂದ ಜನರನ್ನು ಕರೆತಂದು, ನಗರದ ಪ್ರಮುಖ ರಸ್ತೆಗಳಲ್ಲಿ ಭಿಕ್ಷಾಟನೆಗೆ ಇಳಿಸುವ ಮಾಫಿಯಾಗಳು ಕಾರ್ಯಾಚರಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇಂತಹ ನಕಲಿ ಘಟನೆಗಳಿಂದಾಗಿ ನಿಜವಾಗಿಯೂ ಅಂಗವೈಕಲ್ಯವಿದ್ದು, ಹೊಟ್ಟೆಪಾಡಿಗಾಗಿ ಅಸಹಾಯಕರಾಗಿ ನೆರವು ಬೇಡುವ ಅಸಲಿ ಸಂತ್ರಸ್ತರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಸಾರ್ವಜನಿಕರಲ್ಲಿ ನಂಬಿಕೆ ಹೊರಟುಹೋಗುತ್ತಿದ್ದು, ನಿಜವಾದ ಸಂಕಷ್ಟದಲ್ಲಿರುವವರಿಗೆ ಸಿಗಬೇಕಾದ ಸಹಾಯ ಮತ್ತು ಮಾನವೀಯ ಅನುಕಂಪ ಸಿಗದಂತಾಗುತ್ತಿದೆ.
ಸಾರ್ವಜನಿಕರೇ ಎಚ್ಚರ, ತಕ್ಷಣ ಪೊಲೀಸರಿಗೆ ದೂರು ನೀಡಿ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆಯೇ, ರಸ್ತೆಯಲ್ಲಿ ಕಾಣುವ ಪ್ರತಿಯೊಬ್ಬ ಭಿಕ್ಷುಕರಿಗೂ ಹಣ ಕೊಡುವ ಮುನ್ನ ನೂರು ಬಾರಿ ಯೋಚಿಸಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ಕಂಡ ತಕ್ಷಣ ಯೋಚನೆ ಮಾಡದೆ ಹಣ ಕೊಡುವ ಬದಲು ಎಚ್ಚರಿಕೆ ವಹಿಸಬೇಕು. ನಿಜವಾದ ನೆರವಿಗಾಗಿ ಮಾನ್ಯತೆ ಪಡೆದ ಸ್ವಯಂಸೇವಾ ಸಂಸ್ಥೆಗಳಿಗೆ (NGO) ಧನಸಹಾಯ ಮಾಡುವುದು ಒಳಿತು.
ಅಲ್ಲದೆ, ನಗರದಲ್ಲಿ ಇಂತಹ ಅನುಮಾನಾಸ್ಪದ ನಕಲಿ ಭಿಕ್ಷಾಟನೆ ಅಥವಾ ಕಳ್ಳತನದ ಜಾಲಗಳು ಕಂಡುಬಂದರೆ ಸಾರ್ವಜನಿಕರು ತಾವೇ ಕಾನೂನು ಕೈಗೆ ತೆಗೆದುಕೊಳ್ಳಬಾರದು. ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.



