ಬೆಂಗಳೂರಿನಲ್ಲಿಗ ಮತ್ತೊಂದು ರಣಕಹಳೆ ಮೊಳಗಿದೆ. ಅಪ್ಲಿಕೇಶನ್ ನಂಬಿಕೊಂಡು ಸವಾರಿ ಹೊರಟಿದ್ದ ಬೈಕ್ ಟ್ಯಾಕ್ಸಿ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ಬೆಳ್ಳಂಬೆಳಗ್ಗೆಯೇ ರೋಡಿಗಿಳಿದು ಅಕ್ಷರಶಃ ಬೇಟೆ ಆಡಿದೆ.
ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿ ಹಾಗೂ ಆಟೋ-ಕ್ಯಾಬ್ ಚಾಲಕರ ನಡುವಿನ ಸಮರ ತಾರಕಕ್ಕೇರಿದೆ. ‘ಒನ್ ಸಿಟಿ ಒನ್ ರೇಟ್’ ಜಾರಿಗೆ ಆಗ್ರಹಿಸಿ ಹಾಗೂ ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಚಾಲಕರು ಸಾರಿಗೆ ಇಲಾಖೆ ಕಚೇರಿ ಮುತ್ತಿಗೆ ಹಾಕಲು ನಿರ್ಧರಿಸಿದ ಬೆನ್ನಲ್ಲೇ, ಇಲಾಖೆ ಅಧಿಕಾರಿಗಳು ಕೂಡ ಗ್ರೌಂಡ್ಗಿಳಿದು ಅಸ್ತ್ರ ಪ್ರಯೋಗಿಸಿದ್ದಾರೆ.
ಬಲೆಗೆ ಬಿದ್ದ ಬೈಕ್ಗಳು: ಕಸ್ಟಮರ್ ಸೋಗಿನಲ್ಲಿ RTO ಆಪರೇಷನ್!
ಬೆಂಗಳೂರಿನ ಒಟ್ಟು 11 ಆರ್ಟಿಒ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಅಕ್ಷರಶಃ ಸೈಲೆಂಟ್ ಆಪರೇಷನ್ ಶುರು ಮಾಡಿದ್ದಾರೆ. ವಿಶೇಷ ಅಂದ್ರೆ, ಅಧಿಕಾರಿಗಳೇ ಮತ್ತು ಆಟೋ ಚಾಲಕರೇ ಸಾಮಾನ್ಯ ಪ್ರಯಾಣಿಕರಂತೆ ಮೊಬೈಲ್ನಲ್ಲಿ ರೈಡ್ ಬುಕ್ ಮಾಡಿ, ಕರೆಸಿಕೊಂಡ ಬೈಕ್ಗಳನ್ನು ಒಮ್ಮೇಲೆ ವಶಕ್ಕೆ ಪಡೆಯುತ್ತಿದ್ದಾರೆ. ಈ ಹೈಡ್ರಾಮಾದಿಂದಾಗಿ ಸಿಟಿಯ ಪ್ರಮುಖ ಜಂಕ್ಷನ್ಗಳಲ್ಲಿ ನೈಜ ಪ್ರಯಾಣಿಕರು ಹಾಗೂ ಸವಾರರು ಕಂಗಾಲಾಗಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿ, ರಾಜಾಜಿನಗರ ಮತ್ತು ಪಶ್ಚಿಮ ಆರ್ಟಿಒ ವ್ಯಾಪ್ತಿಯಲ್ಲಂತೂ ನೂರಕ್ಕೂ ಹೆಚ್ಚು ಬೈಕ್ಗಳು ಒಂದೇ ದಿನದಲ್ಲಿ ಸೀಜ್ ಆಗಿವೆ. ಕೆಲವೆಡೆ ಬೈಕ್ ಸವಾರರ ಮೊಬೈಲ್ ಫೋನ್ಗಳನ್ನೇ ಕಿತ್ತುಕೊಂಡು ಅಪ್ಲಿಕೇಶನ್ ಹಿಸ್ಟರಿ ಚೆಕ್ ಮಾಡಲಾಗುತ್ತಿದ್ದು, ಸ್ಥಳದಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ರಾಜಾಜಿನಗರ ಆರ್ಟಿಒ ಕಚೇರಿ ಮುಂದೆ ರಣರಂಗವೇ ಸೃಷ್ಟಿಯಾಗಿತ್ತು.
ಬಿಳಿ ಬೋರ್ಡ್ ಗಾಡಿ ಕಮರ್ಷಿಯಲ್ ಇಲ್ಲ: ಬೀಳಲಿದೆ ಭಾರಿ ದಂಡ!
ನಿಯಮ ಮೀರಿದವರಿಗೆ ಕೇವಲ ಬೈಕ್ ಸೀಜ್ ಮಾಡಿ ಬಿಡ್ತಿಲ್ಲ, ಬದಲಿಗೆ ದಂಡದ ಬರೆ ಕೂಡ ಎಳೆಯಲಾಗುತ್ತಿದೆ. ವೈಟ್ ಬೋರ್ಡ್ ವಾಹನಗಳನ್ನು ಕಮರ್ಷಿಯಲ್ ಟ್ಯಾಕ್ಸಿಯಾಗಿ ಬಳಸುವುದು ಕಾನೂನುಬಾಹಿರ ಎಂದು ರಾಜಾಜಿನಗರ ಆರ್ಟಿಒ ಅಧಿಕಾರಿ ಶಿವಪ್ರಸಾದ್ ಮಲ್ಲಯ್ಯ ಸ್ಪಷ್ಟಪಡಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 200ರ ಅಡಿಯಲ್ಲಿ ಸಿಕ್ಕಿಬಿದ್ದ ಪ್ರತಿಯೊಂದು ಬೈಕ್ ಮೇಲೆ ಬರೋಬ್ಬರಿ 10 ರಿಂದ 15 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತಿದೆ.
ಇಷ್ಟಕ್ಕೇ ಆಟ ಮುಗಿದಿಲ್ಲ; ಕೇವಲ ಫೈನ್ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗೋದಲ್ಲ, ಇದರ ಜೊತೆಗೆ ವಾಹನದ ಆರ್ಸಿ (RC) ಮತ್ತು ಚಾಲಕರ ಡ್ರೈವಿಂಗ್ ಲೈಸೆನ್ಸ್ (DL) ಅನ್ನು ಕೂಡ ಅಮಾನತು (Suspend) ಮಾಡಲು ಇಲಾಖೆ ಮುಂದಾಗಿದೆ. ಇದು ಬೈಕ್ ಟ್ಯಾಕ್ಸಿ ನಂಬಿ ದುಡಿಯುತ್ತಿರುವ ಸಾವಿರಾರು ಯುವಕರ ನಿದ್ದೆಗೆಡಿಸಿದೆ.
‘ಯಾವುದೇ ಮುನ್ಸೂಚನೆ ನೀಡಿಲ್ಲ’: ಆಕ್ರೋಶದ ಕಟ್ಟೆಯೊಡೆದ ಸವಾರರ ಅಳಲು
ಆರ್ಟಿಒ ಸಿಬ್ಬಂದಿಯ ಈ ದಿಢೀರ್ ದಾಳಿಗೆ ಬೈಕ್ ಟ್ಯಾಕ್ಸಿ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಗಾಡಿ ಜಪ್ತಿ ಮಾಡಿದರೆ ನಮ್ಮ ಪಾಡೇನು?”ಎಂದು ಸವಾರರು ಕಣ್ಣೀರಿಡುತ್ತಿದ್ದಾರೆ. ಪಾರ್ಟ್-ಟೈಮ್ ಡೆಲಿವರಿ ಅಥವಾ ಬೈಕ್ ಟ್ಯಾಕ್ಸಿ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಇದು ದೊಡ್ಡ ಪೆಟ್ಟು ನೀಡಿದೆ.
ಆಪ್ಗಳ ಮೂಲಕ ಲೀಗಲ್ ಆಗಿ ಸೇವೆ ನೀಡುತ್ತಿದ್ದರೂ ನಮ್ಮನ್ನು ಅಕ್ರಮಗಾರರಂತೆ ಕಾಣಲಾಗುತ್ತಿದೆ ಎಂದು ಚಾಲಕರು ಆರೋಪಿಸುತ್ತಿದ್ದಾರೆ. ದಿನದ ಖರ್ಚಿಗೆ ಹಾಗೂ ಇಎಂಐ ಕಟ್ಟಲು ಪರದಾಡುವ ನಮಗೆ ಈ ದಿಢೀರ್ ಕಾರ್ಯಾಚರಣೆ ಆಘಾತ ತಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ತೆರೆಮರೆಯಲ್ಲಿ ಆಟೋ-ಕ್ಯಾಬ್ ಒಕ್ಕೂಟಗಳ ಲಾಬಿ?
ಈ ಕಾರ್ಯಾಚರಣೆ ಹಿಂದೆ ಆಟೋ ಹಾಗೂ ಕ್ಯಾಬ್ ಚಾಲಕರ ದೊಡ್ಡ ಕೈವಾಡವಿದೆ ಎಂಬ ಗುಸುಗುಸು ಜೋರಾಗಿದೆ. ಬೈಕ್ ಟ್ಯಾಕ್ಸಿಗಳಿಂದ ತಮ್ಮ ದೈನಂದಿನ ವ್ಯಾಪಾರ ಸಂಪೂರ್ಣ ಕುಸಿದಿದೆ ಎಂದು ಹೈರಾಣಾಗಿರುವ ಆಟೋ ಚಾಲಕರು, ಸ್ವತಃ ತಾವೇ ಬೈಕ್ ಟ್ಯಾಕ್ಸಿ ಬುಕ್ ಮಾಡಿ ಅಧಿಕಾರಿಗಳಿಗೆ ಲೊಕೇಶನ್ ಕೊಟ್ಟು ವಾಹನಗಳನ್ನು ಸೀಜ್ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಒಟ್ಟಿನಲ್ಲಿ, ಬೈಕ್ ಟ್ಯಾಕ್ಸಿ ಹಾಗೂ ಆಟೋ ಚಾಲಕರ ತಿಕ್ಕಾಟ ಈಗ ಅಧಿಕಾರಿಗಳ ಎಂಟ್ರಿಯೊಂದಿಗೆ ಮತ್ತೊಂದು ಹಂತ ತಲುಪಿದೆ.
ಮುಂದಿನ ಒಂದು ವಾರ ನರಕ ದರ್ಶನ: ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ!
ಸಾರಿಗೆ ಇಲಾಖೆ ಸದ್ಯಕ್ಕೆ ಈ ಕಾರ್ಯಾಚರಣೆಯನ್ನು ಇಲ್ಲಿಗೆ ನಿಲ್ಲಿಸುವ ಲಕ್ಷಣಗಳಿಲ್ಲ. ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ಬೆಂಗಳಾದ್ಯಂತ ಈ ಸ್ಪೆಷಲ್ ಡ್ರೈವ್ ಕಟ್ಟುನಿಟ್ಟಾಗಿ ಮುಂದುವರಿಯಲಿದೆ. ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವ ಯಾವುದೇ ಬೈಕ್ ಟ್ಯಾಕ್ಸಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಇಲಾಖೆ ಖಡಕ್ ವಾರ್ನಿಂಗ್ ಕೊಟ್ಟಿದೆ. ಒಟ್ಟಿನಲ್ಲಿ ಸದ್ಯ ಬ್ರೇಕಿಂಗ್ ನ್ಯೂಸ್ ಆಗಿರುವ ಈ ಬೈಕ್ ಟ್ಯಾಕ್ಸಿ ವಾರ್ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.



