No menu items!
15.4 C
Munich
Friday, October 2, 2026

ಪಿರಿಯಡ್ಸ್ ಬಂದಾಗ ಹೊಟ್ಟೆ ಉಬ್ಬರ, ಮಲಬದ್ಧತೆ ಕಾಡುತ್ತಾ? ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು?

Must read

ಪಿರಿಯಡ್ಸ್ ಬಂದಾಗ ಹೊಟ್ಟೆ ಉಬ್ಬರ, ಮಲಬದ್ಧತೆ ಕಾಡುತ್ತಾ? ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು?

ಋತುಚಕ್ರ ಅಥವಾ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಬೆನ್ನು ನೋವು, ಹೊಟ್ಟೆ ಸೆಳೆತ, ಆಯಾಸ ಹಾಗೂ ನಿಶ್ಯಕ್ತಿಯ ಜೊತೆಗೆ ಜೀರ್ಣಾಂಗ ವ್ಯವಸ್ಥೆಯ ಮೇಲೂ ತೀವ್ರ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

ಪರಿಣಾಮವಾಗಿ ಈ ಅವಧಿಯಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಹಾಗೂ ಅತಿಸಾರದಂತಹ ಸಮಸ್ಯೆಗಳು ಬಾಧಿಸುವುದು ಸಾಮಾನ್ಯ. ಇದಕ್ಕೆ ಅಸಲಿ ಕಾರಣವೇನು ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬ ಬಗ್ಗೆ ತಜ್ಞ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

ಜೀರ್ಣಾಂಗದ ಏರುಪೇರಿಗೆ ಹಾರ್ಮೋನುಗಳೇ ಮೂಲ ಕಾರಣ!

ಮುಟ್ಟಿನ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಏರಿಳಿತಗಳು ಜೀರ್ಣಾಂಗ ವ್ಯೂಹದ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ:

ಪ್ರೊಜೆಸ್ಟರಾನ್ ಕುಸಿತ (ಮಲಬದ್ಧತೆ ಹಾಗೂ ಗ್ಯಾಸ್): ಮುಟ್ಟು ಪ್ರಾರಂಭವಾಗುವ ಒಂದು ವಾರದ ಮೊದಲು ‘ಪ್ರೊಜೆಸ್ಟರಾನ್’ ಹಾರ್ಮೋನ್ ಮಟ್ಟ ತೀವ್ರವಾಗಿ ಕುಸಿಯುತ್ತದೆ. ಇದರಿಂದ ಕರುಳಿನಲ್ಲಿ ಆಹಾರದ ಚಲನೆ ನಿಧಾನವಾಗಿ, ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಅಲ್ಲದೆ, ದೈಹಿಕ ಚಟುವಟಿಕೆ ಕೊರತೆ, ಜಂಕ್ ಫುಡ್ ಸೇವನೆ ಹಾಗೂ ಸಾಕಷ್ಟು ನೀರು ಕುಡಿಯದಿರುವುದು ಮಲಬದ್ಧತೆಗೆ ಕಾರಣವಾಗುತ್ತದೆ. ಲಘು ದೈಹಿಕ ಚಟುವಟಿಕೆಯು ಸೆಳೆತವನ್ನು ಕಡಿಮೆ ಮಾಡುತ್ತದೆ ಎಂದು ‘ಮೇಯೊ ಕ್ಲಿನಿಕ್’ (Mayo Clinic) ತಿಳಿಸಿದೆ.

ಪ್ರೊಸ್ಟಗ್ಲಾಂಡಿನ್ಸ್ ಹೆಚ್ಚಳ (ಅತಿಸಾರ ಹಾಗೂ ವಾಕರಿಕೆ): ರಕ್ತಸ್ರಾವ ಆರಂಭವಾದಾಗ ‘ಪ್ರೊಸ್ಟಗ್ಲಾಂಡಿನ್ಸ್’ ಹಾರ್ಮೋನ್ ಹೆಚ್ಚಾಗಿ ಕರುಳಿನ ಚಲನೆಯನ್ನು ವೇಗಗೊಳಿಸುತ್ತದೆ. ಇದರಿಂದ ಅತಿಸಾರ (ಭೇದಿ) ಹಾಗೂ ವಾಕರಿಕೆ ಉಂಟಾಗಬಹುದು. ಗರ್ಭನಿರೋಧಕ ಮಾತ್ರೆ ಸೇವಿಸುವವರಲ್ಲೂ ಮೊದಲ ದಿನ ಜೀರ್ಣಾಂಗದ ಕಿರಿಕಿರಿ ಹೆಚ್ಚಿರುತ್ತದೆ ಎಂದು ‘ಸ್ಪ್ರಿಂಗರ್ ನೇಚರ್ ಲಿಂಕ್’ ವರದಿ ಹೇಳುತ್ತದೆ.

ಪರಿಹಾರಕ್ಕೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು:

ಈ ಜೀರ್ಣಕಾರಿ ಸಮಸ್ಯೆಗಳು ಮುಟ್ಟು ಮುಗಿದ ನಂತರ ಸಾಮಾನ್ಯವಾಗಿ ಕಡಿಮೆಯಾಗುತ್ತವೆ. ಆದರೂ ಈ ಸಮಯದಲ್ಲಿ ಶಮನ ಪಡೆಯಲು ‘ಕ್ಲೀವ್‌ಲ್ಯಾಂಡ್ ಕ್ಲಿನಿಕ್’ ಹಾಗೂ ವೈದ್ಯರು ಈ ಕೆಳಗಿನ ಸರಳ ಕ್ರಮಗಳನ್ನು ಸೂಚಿಸುತ್ತಾರೆ:

ಸಣ್ಣ ಪ್ರಮಾಣದ ಊಟ: ಒಂದೇ ಬಾರಿಗೆ ಹೆಚ್ಚು ತಿನ್ನದೇ, ಕಡಿಮೆ ಪ್ರಮಾಣದಲ್ಲಿ ಪದೇ ಪದೇ ಆಹಾರ ಸೇವಿಸುವುದರಿಂದ ಜೀರ್ಣಾಂಗದ ಮೇಲಿನ ಅನಗತ್ಯ ಒತ್ತಡ ಕಡಿಮೆಯಾಗುತ್ತದೆ.

ನಾರಿನಂಶವಿರುವ ಆಹಾರ (Fiber Rich Food): ಓಟ್ಸ್, ತರಕಾರಿಗಳು ಹಾಗೂ ಹಣ್ಣುಗಳಂತಹ ಫೈಬರ್ ಭರಿತ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಸಾಕಷ್ಟು ನೀರು ಕುಡಿಯುವುದು: ಅಧಿಕ ನೀರು ಕುಡಿಯುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರ ಹಾಗೂ ಮಲಬದ್ಧತೆ ನಿವಾರಣೆಯಾಗುತ್ತದೆ.

ಶುಂಠಿ ಅಥವಾ ಪುದೀನಾ ಚಹಾ: ವಾಕರಿಕೆ ಹಾಗೂ ವಾಂತಿ ಲಕ್ಷಣಗಳಿದ್ದರೆ ಶುಂಠಿ ಅಥವಾ ಪುದೀನಾ ಟೀ ಕುಡಿಯುವುದು ಉತ್ತಮ.

ಪ್ರೋಬಯಾಟಿಕ್ ಮೊಸರು: ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಹೆಚ್ಚಿರುವುದರಿಂದ ಅತಿಸಾರ (ಭೇದಿ) ಶಮನಕ್ಕೆ ಇದು ಅತ್ಯಂತ ಸಹಕಾರಿ.

ತ್ಯಜಿಸಬೇಕಾದ ಆಹಾರಗಳು: ಕೆಫೀನ್ (ಕಾಫಿ/ಟೀ), ಹಾಲು ಹಾಗೂ ಹಾಲಿನ ಉತ್ಪನ್ನಗಳು, ಎಣ್ಣೆಯುಕ್ತ ಮತ್ತು ಬೇಕರಿ ಆಹಾರಗಳನ್ನು ತಪ್ಪಿಸಿ. ಒಮೆಗಾ-3 ಹಾಗೂ ಬೀಜಗಳನ್ನು (Seeds) ಆಹಾರದಲ್ಲಿ ಸೇರಿಸಿ.

ಗಮನಿಸಿ: ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೂ ಜೀರ್ಣಕಾರಿ ತೊಂದರೆಗಳು ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇಂತಹ ಲಕ್ಷಣಗಳು ಎಂಡೊಮೆಟ್ರಿಯೊಸಿಸ್ ಅಥವಾ ಇರಿಟೇಬಲ್ ಬೊವೆಲ್ ಸಿಂಡ್ರೋಮ್ (IBS) ನಂತಹ ಗಂಭೀರ ಕಾಯಿಲೆಗಳ ಮುನ್ಸೂಚನೆಯೂ ಆಗಿರಬಹುದು.

- Advertisement -spot_img

More articles

- Advertisement -spot_img

Latest article