ಡಾ ರಾಜ್ ಕುಮಾರ್ ಅವರ ಸಮಾಧಿ ವಿಚಾರದಲ್ಲಿ ಚೇತನ್ ಅಹಿಂಸಾ ಹಚ್ಚಿದ ಕಿಡಿ ಈಗ ಜ್ವಾಲೆಯಾಗಿ ಧಗಧಗಿಸುತ್ತಿದೆ. ಚೇತನ್ ಹೇಳಿಕೆ ಅಣ್ಣಾವ್ರ ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಚೇತನ್ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಚೇತನ್ ಕ್ಷಮೆ ಕೇಳಿದ್ದಾರಾದರೂ ಅದು ಒಲ್ಲದ ಮನಸಿಂದ ಎನ್ನುವುದು ಖಚಿತ.
ನಿನ್ನೆ (ಏಪ್ರಿಲ್ 25) ಅವರ ಕ್ಷಮಾಪಣೆಯ ವಿಡಿಯೋ ನೋಡಿದರೆ ಎಂತಹವರಿಗಾದರೂ ಈ ಅನುಮಾನ ಬಾರದಿರದು. ಈ ವಿಚಾರ ಕೂಡ ಚರ್ಚೆಗೀಡಾಗಿದೆ. ಹೇಗೋ ಕ್ಷಮೆ ಕೇಳಿದ್ದಾರಲ್ಲ, ವಿಷಯ ಇಲ್ಲಿಗೆ ಬಿಡಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆ ಈಗ ಚೇತನ್ ಅಭಿಮಾನದ ಹೆಸರಿನಲ್ಲಿ ದಬ್ಬಾಳಿಕೆ ಮಾಡುವುದು ಸರಿ ಅಲ್ಲ ಎಂದು ಹೇಳಿದ್ಧಾರೆ.
ಹೌದು, ಈ ಕುರಿತು ಮಾಧ್ಯಮದವರ ಜೊತೆ ಇಂದು (ಏಪ್ರಿಲ್ 26) ಮಾತನಾಡಿರುವ ಚೇತನ್, ಬಾಲ್ಯದಿಂದ ನಾನು ಕೂಡ ಡಾ.ರಾಜ್ ಕುಮಾರ್ ಅವರ ಅಭಿಮಾನಿ ಎಂದು ಹೇಳಿದ್ಧಾರೆ. ರಾಜ್ ಕುಮಾರ್ ಅವರನ್ನು ನಾನು ಯಾವತ್ತೂ ಗುರಿ ಮಾಡಿಕೊಂಡು ಮಾತನಾಡಿಲ್ಲ ಎಂದು ಹೇಳಿರುವ ಚೇತನ್ ಅಣ್ಣಾವ್ರು ಬದುಕಿದ್ದರೆ ಅವರೇ ತಮಗೆ ಇಷ್ಟು ದೊಡ್ಡ ಜಾಗ ಬೇಕಾ ಎಂದು ಕೇಳುತ್ತಿದ್ದರು. ಅವರು ಬಹಳ ಸೌಜನ್ಯವಂತರು ಎಂದು ಹೇಳಿದ್ಧಾರೆ.
ಇದೇ ಸಮಯದಲ್ಲಿ ಸಾರಾ ಗೋವಿಂದು ವಿರುದ್ಧ ಕಿಡಿ ಕಾರಿರುವ ಚೇತನ್ ಅಹಿಂಸಾ ಅಭಿಮಾನಿ ಸಂಘದ ಹೆಸರಿನಲ್ಲಿ ದಬ್ಬಾಳಿಕೆ ಮಾಡಿದರೆ ಸಹಿಸಲು ಸಾಧ್ಯ ಇಲ್ಲ ಎಂದು ಹೇಳಿದ್ಧಾರೆ. ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ, ನಾವೆಲ್ಲರೂ ಕಾನೂನಿನ ಅಡಿಯಲ್ಲಿ ಇದ್ದೇವೆ ಎಂದು ಹೇಳಿರುವ ಚೇತನ್, ಸಾ.ರಾ. ಗೋವಿಂದ್ ಅಂತಹ ಕೆಲವರು ರಾಜ್ ಅಭಿಮಾನಿಗಳ ಹೆಸರಿನಲ್ಲಿ ಮಹಿಳಾ ನಿಂದನೆ ಮಾಡುತ್ತಾ, ರಾಜ್ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ರಾಜ್‌ಕುಮಾರ್ ಅವರಿಂದ ಸೌಜನ್ಯದಿಂದ ಹೋರಾಡುವುದನ್ನು ಕಲಿತಿದ್ದೇವೆ, ದಬ್ಬಾಳಿಕೆಯನ್ನಲ್ಲ ಎಂದು ಬೆಂಕಿಯುಂಡೆ ಉಗುಳಿದ್ದಾರೆ.
20ನೇ ಶತಮಾನದ ದೊಡ್ಡ ಸೂಪರ್ ಸ್ಟಾರ್ ರಾಜ್‌ಕುಮಾರ್ . ಆದರೂ ಕೂಡ ಅವರು ಕಾನೂನಿನ ಅಡಿಯಲ್ಲಿ ಬಹಳ ಸರಳವಾಗಿ ಬದುಕಿದ್ದಾರೆ ಎಂದು ಹೇಳಿರುವ ಚೇತನ್ ಅವರ ರೀತಿಯೇ ನಾವು ಬದುಕಬೇಕೇ ಹೊರತು ಜೀವ ಬೆದರಿಕೆ ಹಾಕಬಾರದು ಎಂದು ಹೇಳಿದ್ದಾರೆ.



