No menu items!
13.9 C
Munich
Wednesday, April 29, 2026

ಹಿಂದಿನೇ ಬರಲ್ಲ, ಇವರು 4,000ಕೋಟಿ ರಾಮಾಯಣದ ಸೀತೆನಾ? ಟ್ರೋಲಿಗರಿಗೆ ಆಹಾರವಾದ ಸಾಯಿ ಪಲ್ಲವಿ

Must read

ಹಿಂದಿ ಭಾಷೆ ಈಗ ಕೇವಲ ಭಾಷೆಯಾಗಿ ಉಳಿದಿಲ್ಲ, ಬದಲಾದ ಈ ಕಾಲದಲ್ಲಿ ಹಿಂದಿ ಅಸ್ತ್ರವಾಗಿದೆ. ದಕ್ಷಿಣ ಭಾರತದವರ ಮೇಲೆ ಹಿಂದಿ ರಾಷ್ಟ್ರಭಾಷೆ ಎಂಬ ಹಸಿ ಸುಳ್ಳನ್ನು ಹೇರುತ್ತಾ ಬಂದಿರುವುದು ಇಂದು ನಿನ್ನೆಯ ಕಥೆಯಲ್ಲ. ಬ್ಯಾಂಕುಗಳಿಂದ ಹಿಡಿದು ರೈಲ್ವೆಯವರೆಗೆ ಉದ್ದೇಶಪೂರ್ವಕವಾಗಿ ಹಿಂದಿ ಭಾಷಿಕರನ್ನು ತುಂಬಿಸಿ, ಸ್ಥಳೀಯ ಗ್ರಾಹಕರಿಗೆ ಭಾಷೆಯ ಪಾಠ ಮಾಡಲು ಹೊರಡುವ ವ್ಯವಸ್ಥಿತ ಪಿತೂರಿ ನಮ್ಮ ಕಣ್ಣಮುಂದೆಯೇ ಇದೆ. ಆದರೆ, ಈ ಭಾಷಾ ಅಹಂಕಾರ ಈಗ ಕೇವಲ ಕಚೇರಿಗಳಿಗೆ ಸೀಮಿತವಾಗಿಲ್ಲ. ಇದು ಬೆಳ್ಳಿತೆರೆಯ ತಾರೆಗಳನ್ನೂ ಬಿಡದೆ ಕಾಡುತ್ತಿದೆ.

ಅದರಲ್ಲಿಯೂ ದಕ್ಷಿಣದ ಪ್ರತಿಭಾವಂತರು ಬಾಲಿವುಡ್‌ಗೆ ಕಾಲಿಟ್ಟ ಕೂಡಲೇ ಅವರ ನಟನಾ ಕೌಶಲಕ್ಕಿಂತ ಹೆಚ್ಚಾಗಿ ಅವರ ಹಿಂದಿ ಪ್ರೌಢಿಮೆಯನ್ನು ಅಳೆಯುವ ಒಂದು ಕೆಟ್ಟ ಪದ್ಧತಿ ಜಾರಿಯಲ್ಲಿದೆ. ಸಿನಿಮಾ ಎಂಬುದು ಒಂದು ಕಲೆ, ಅದಕ್ಕೆ ಭಾಷೆಯ ಹಂಗಿಲ್ಲ ಎಂದು ನಾವು ಎಷ್ಟೇ ವಾದಿಸಿದರೂ, ಸೋಶಿಯಲ್ ಮೀಡಿಯಾದಲ್ಲಿನ ಹಿಂದಿ ಭಾಷಾ ಪಂಡಿತರು ಮಾತ್ರ ದಕ್ಷಿಣದವರನ್ನು ಅವಮಾನಿಸಲು ಹೊಂಚು ಹಾಕುತ್ತಲೇ ಇರುತ್ತಾರೆ. ಈ ಅಲಿಖಿತ ನಿಯಮಕ್ಕೆ ಈಗ ಸಾಯಿ ಪಲ್ಲವಿ ಬಲಿಯಾಗಿದ್ದಾರೆ.

ಹೌದು. ಸಹಜ ಸುಂದರಿ ಸಾಯಿ ಪಲ್ಲವಿ ತಮ್ಮ ನಟನೆಯ ಮೂಲಕ ಕೇವಲ ಸೌತ್‌ನಲ್ಲಿ ಮಾತ್ರವಲ್ಲ, ಬಾಲಿವುಡ್ ಮಂದಿಯ ಹೃದಯವನ್ನೂ ಗೆದ್ದವರು. ಇಂಥಾ ಸಾಯಿ ಪಲ್ಲವಿ ಈಗ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ‘ಏಕ್ ದಿನ್’ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಡುತ್ತಿದ್ದಾರೆ. ಮೇ 1ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರದ ವೇಳೆ ನಡೆದ ಒಂದು ಘಟನೆ ಈಗ ದಕ್ಷಿಣ ಮತ್ತು ಉತ್ತರದ ನಡುವೆ ದೊಡ್ಡ ಭಾಷಾ ಸಮರವನ್ನೇ ಸೃಷ್ಟಿಸಿದೆ.

ಮುಂಬೈನಲ್ಲಿ ನಡೆದ ‘ಏಕ್ ದಿನ್ ಕಿ ಮೆಹಫಿಲ್’ ಕಾರ್ಯಕ್ರಮದಲ್ಲಿ ಸಾಕ್ಷಾತ್ ಆಮೀರ್ ಖಾನ್ ಅವರೇ ಸಾಯಿ ಪಲ್ಲವಿಯನ್ನು ದೇಶದ ಅತ್ಯುತ್ತಮ ನಟಿ ಎಂದು ಕೊಂಡಾಡಿದ್ದರು. ಆದರೆ, ಅದೇ ವೇದಿಕೆಯಲ್ಲಿ ಸಾಯಿ ಪಲ್ಲವಿ ತಮಗೆ ಹಿಂದಿ ಅಷ್ಟಾಗಿ ಬರಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಚಾಹತಾ ಮತ್ತು ಚಾಹತಿ ಪದಗಳ ನಡುವಿನ ವ್ಯತ್ಯಾಸವೇ ನನಗೆ ಗೊತ್ತಾಗಲ್ಲ ಎಂದು ಅವರು ತಮಾಷೆಯಾಗಿ ಹೇಳಿದ ಮಾತು ಈಗ ಟ್ರೋಲಿಗರ ಕೈಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ.

ಸಾಯಿ ಪಲ್ಲವಿ ಅವರ ಈ ಮುಗ್ಧತೆಯನ್ನು ಟ್ರೋಲ್ ಮಾಡುತ್ತಿರುವ ಉತ್ತರ ಭಾರತದ ಒಂದು ವರ್ಗ, 4,000 ಕೋಟಿ ಬಜೆಟ್‌ನ ‘ರಾಮಾಯಣ’ ಚಿತ್ರದಲ್ಲಿ ಸೀತೆ ಪಾತ್ರ ಮಾಡುತ್ತಿರುವ ನಟಿಗೆ ಹಿಂದಿಯೇ ಬರಲ್ಲ ಎಂದರೆ ಹೇಗೆ? ಎಂದು ಕಿಡಿಕಾರುತ್ತಿದ್ದಾರೆ.

ಸೀತೆಯ ಪಾತ್ರ ಪವಿತ್ರವಾದುದು, ಸಂಭಾಷಣೆ ಸ್ಪಷ್ಟವಾಗಿರಬೇಕು ಎಂಬ ನೆಪವೊಡ್ಡಿ, ದಕ್ಷಿಣದ ನಟಿಯನ್ನು ಹೇಗಾದರೂ ಮಾಡಿ ಕೆಳಗೆ ಎಳೆಯಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

ಇಷ್ಟೇ ಅಲ್ಲ, ನಿರ್ದೇಶಕ ನಿತೇಶ್ ತಿವಾರಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ಟ್ರೋಲಿಗರು, ಸಾಯಿ ಪಲ್ಲವಿಯ ಆಯ್ಕೆಯನ್ನು ದುರಂತ ಎಂದು ಬಣ್ಣಿಸುತ್ತಿದ್ದಾರೆ. ಭಾಷೆಯ ಭಾವನೆ ಅರ್ಥವಾಗದಿದ್ದರೆ ಪಾತ್ರಕ್ಕೆ ಜೀವ ತುಂಬಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, 4,000 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ನೀರಿನಲ್ಲಿ ಹೋಮ ಮಾಡಿದಂತೆ ಎಂದು ಹೀಯಾಳಿಸುತ್ತಿದ್ದಾರೆ.

ಆದರೆ, ನಟನೆ ಎಂದರೆ ಕೇವಲ ಶಬ್ದಗಳ ಉಚ್ಚಾರಣೆಯಲ್ಲ ಎಂಬ ಕನಿಷ್ಠ ಜ್ಞಾನವೂ ಇವರಿಗಿಲ್ಲವೇ ಎಂಬುದು ಅಭಿಮಾನಿಗಳ ಪ್ರಶ್ನೆ. ಸೀತೆ ಎಂಬ ಪಾತ್ರಕ್ಕೆ ಬೇಕಾದ ಪಾವಿತ್ರ್ಯತೆ ಮತ್ತು ಭಾವನೆಗಳನ್ನು ಅಭಿನಯದ ಮೂಲಕ ಸಾಯಿ ಪಲ್ಲವಿ ಖಂಡಿತ ನೀಡಬಲ್ಲರು. ಆದರೂ, ಕೇವಲ ಭಾಷೆಯ ನೆಪವೊಡ್ಡಿ ಒಬ್ಬ ಕಲಾವಿದೆಯನ್ನು ಅವಮಾನಿಸುತ್ತಿರುವುದು ಬಾಲಿವುಡ್‌ನ ಸಂಕುಚಿತ ಮನೋಭಾವವನ್ನು ಎತ್ತಿ ತೋರಿಸುತ್ತಿದೆ.

ಒಟ್ಟಿನಲ್ಲಿ, ಸಾಯಿ ಪಲ್ಲವಿ ಮೇಲಿನ ಈ ದಾಳಿ ಕೇವಲ ವೈಯಕ್ತಿಕವಲ್ಲ. ಇದು ದಕ್ಷಿಣದ ಪ್ರತಿಭೆಗಳ ಏಳಿಗೆಯನ್ನು ಸಹಿಸದ ಭಾಷಾ ಅಂಧಾಭಿಮಾನದ ಪರಮಾವಧಿ. ಸಾಯಿ ಪಲ್ಲವಿ ತಮ್ಮ ನಟನೆಯ ಮೂಲಕವೇ ಈ ಎಲ್ಲಾ ಟ್ರೋಲ್ಸ್‌ಗಳಿಗೆ ಚಿತ್ರಮಂದಿರಗಳಲ್ಲಿ ಉತ್ತರ ನೀಡಲಿದ್ದಾರೆ ಎಂಬ ಭರವಸೆ ಅವರ ಅಭಿಮಾನಿಗಳಲ್ಲಿದೆ.

- Advertisement -spot_img

More articles

- Advertisement -spot_img

Latest article