ಬೆಂಗಳೂರು ಸರ್ಕಾರ ದೆಹಲಿಗೆ ಶಿಫ್ಟ್ ಆಗಿದೆ: ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಆಡಳಿತ ಯಂತ್ರವೇ ದೆಹಲಿಗೆ ಸ್ಥಳಾಂತರಗೊಂಡಂತಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಸರ್ಕಾರ ಮೊದಲಿನಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿರಲಿಲ್ಲ. ಇದೀಗ ಸಿಎಂ-ಡಿಸಿಎಂ ಕುರ್ಚಿ ರಾಜಕಾರಣದ ಕಾರಣ ಆಡಳಿತ ವ್ಯವಸ್ಥೆಯೇ ದೆಹಲಿಗೆ ಶಿಫ್ಟ್ ಆಗಿದೆ” ಎಂದು ಟೀಕಿಸಿದರು.
ರಾಜ್ಯದಲ್ಲಿ ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ವಲಯದವರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವುದೇ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ಅವರು, “ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸೇ ಸರ್ಕಾರಕ್ಕಿಲ್ಲ” ಎಂದರು.
ಭ್ರಷ್ಟಾಚಾರದ ವಿಚಾರ ಪ್ರಸ್ತಾಪಿಸಿದ ಸಿ.ಟಿ.ರವಿ, “ಅಧಿಕಾರಕ್ಕೆ ಬರುವಾಗ ಭ್ರಷ್ಟಾಚಾರರಹಿತ ಆಡಳಿತ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಇದು 60 ಪ್ರತಿಶತ ಸರ್ಕಾರವಾಗಿದೆ. ಯಾವ ಇಲಾಖೆಯಲ್ಲಿ ಲಂಚವಿಲ್ಲ ಎಂದು ಹೇಳಬಹುದು? ಯಾವ ಸಚಿವರು ನಾವು ಲಂಚ ಪಡೆಯುವುದಿಲ್ಲ ಎಂದು ಹೇಳುವ ಸ್ಥಿತಿಯಲ್ಲಿದ್ದಾರೆ?” ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯವರೇ ರಾಜ್ಯದಲ್ಲಿಲ್ಲ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದರೆ ಸಚಿವರು ಜನರ ಸಮಸ್ಯೆ ಪರಿಹರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
“ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಿಧಾನಸೌಧಕ್ಕೆ ಬಂದರೆ ಸರ್ಕಾರವನ್ನು ಹುಡುಕಲು ದೆಹಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರು ತಮ್ಮ ಸ್ಥಾನ ಉಳಿಯುತ್ತದೆಯೇ? ಯಾವ ಖಾತೆ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆ ಕೇಳಲು ಯಾರಿಗೂ ಸಮಯವಿಲ್ಲ” ಎಂದು ಕಿಡಿಕಾರಿದರು.
2023ರ ಚುನಾವಣೆಯಲ್ಲಿ ಜನರು 136 ಸ್ಥಾನಗಳನ್ನು ಅಭಿವೃದ್ಧಿಗಾಗಿ ನೀಡಿದ್ದಾರೆ ಹೊರತು ಕುರ್ಚಿಗಾಗಿ ಕಿತ್ತಾಟ ನಡೆಸಲು ಅಲ್ಲ ಎಂದು ಹೇಳಿದ ಅವರು, “ಈಗಲಾದರೂ ಕಾಂಗ್ರೆಸ್ ನಾಯಕರು ಒಳಜಗಳ ನಿಲ್ಲಿಸಬೇಕು. ಇಲ್ಲವಾದರೆ ಅಧಿಕಾರ ನೀಡಿದ ಜನರೇ ನಿಮ್ಮನ್ನು ಕುರ್ಚಿಯಿಂದ ಕೆಳಗಿಳಿಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.



