No menu items!
30.2 C
Munich
Thursday, August 13, 2026

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಮತ್ತೊಂದು ಹಿನ್ನಡೆ: ಮಾಫಿ ಸಾಕ್ಷಿ ಅರ್ಜಿಗೆ ಆಕ್ಷೇಪಣೆಗೆ ಹೈಕೋರ್ಟ್ ನಕಾರ

Must read

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಮತ್ತೊಂದು ಹಿನ್ನಡೆ: ಮಾಫಿ ಸಾಕ್ಷಿ ಅರ್ಜಿಗೆ ಆಕ್ಷೇಪಣೆಗೆ ಹೈಕೋರ್ಟ್ ನಕಾರ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೈಕೋರ್ಟ್ನಲ್ಲೂ ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಮೂಲಕ 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶವನ್ನೇ ಹೈಕೋರ್ಟ್ ಎತ್ತಿಹಿಡಿದಿದೆ.
ಮಾಫಿ ಸಾಕ್ಷಿಯಾಗಲು ಪ್ರದೋಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಇತರೆ ಆರೋಪಿಗಳ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ಸೆಷನ್ಸ್ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ಮಾಫಿ ಸಾಕ್ಷಿ ಅರ್ಜಿಯನ್ನು ಪರಿಗಣಿಸುವ ಮುನ್ನ ಇತರೆ ಆರೋಪಿಗಳ ವಾದವನ್ನೂ ಆಲಿಸಬೇಕು ಎಂದು ವಾದಿಸಿದರು.
ಆದರೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ಅವರು, ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆ ವೇಳೆ ಇತರೆ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ವಾದಿಸಿದರು. ವಿಚಾರಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿದ್ದರೆ ಮಾತ್ರ ಆರೋಪಿಗಳು ಅದನ್ನು ಪ್ರಶ್ನಿಸಬಹುದು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆ ನಡೆಯುವ ಹಂತದಲ್ಲಿ ಇತರೆ ಆರೋಪಿಗಳು ಮಧ್ಯಪ್ರವೇಶಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು. ದರ್ಶನ್ ಪರ ವಕೀಲರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿತು.
ಇದೇ ವೇಳೆ, ನೈಸರ್ಗಿಕ ನ್ಯಾಯದ ತತ್ವದ ಆಧಾರದ ಮೇಲೆ ಸೆಷನ್ಸ್ ಕೋರ್ಟ್ ತಮ್ಮ ವಾದವನ್ನೂ ಆಲಿಸಬೇಕು ಎಂದು ಹಷ್ಮತ್ ಪಾಷಾ ವಾದಿಸಿದರು. ಅಲ್ಲದೆ, ಪ್ರದೋಷ್ ಎರಡು ವರ್ಷಗಳ ಕಾಲ ಮೌನವಾಗಿದ್ದು, ಇದೀಗ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆಯ ಹಂತದಲ್ಲಿ ಇತರೆ ಆರೋಪಿಗಳು ಪ್ರಶ್ನೆ ಮಾಡುವಂತಿಲ್ಲ ಎಂದು ಪುನರುಚ್ಚರಿಸಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿತು.
ಇದರ ನಡುವೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ನಟ ದರ್ಶನ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವ ವಿಚಾರವೂ ವಿಚಾರಣೆಗೆ ಬಂದಿದೆ. ಈ ಕುರಿತು ಸೋಮವಾರ ಆದೇಶ ನೀಡುವುದಾಗಿ ನ್ಯಾಯಾಲಯ ತಿಳಿಸಿದೆ.
ಹೀಗಾಗಿ ಸೋಮವಾರ ದರ್ಶನ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ.

- Advertisement -spot_img

More articles

- Advertisement -spot_img

Latest article