ದರ್ಶನ್ ಪತ್ನಿಯ ಇನ್ಸ್ಟಾಗ್ರಾಂ ಸ್ಟೋರಿ: ಅನುಮಾನಗಳನ್ನು ಮೂಡಿಸುತ್ತಿರುವ ವಿಜಯಲಕ್ಷ್ಮಿ ಪೋಸ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿಯುತ್ತಿರುವ ನಡುವೆಯೇ, ಆರೋಪಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಇದೀಗ ಗಮನ ಸೆಳೆಯುತ್ತಿದೆ. ಪ್ರಕರಣದ ಹಿನ್ನೆಲೆಯಲ್ಲಿ ದರ್ಶನ್ಗೆ ಕಾನೂನು ನೆರವು ಸೇರಿದಂತೆ ಹಲವು ರೀತಿಯಲ್ಲಿ ಬೆಂಬಲ ನೀಡುತ್ತಿರುವ ವಿಜಯಲಕ್ಷ್ಮಿ, ಇದೀಗ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಮಾಕ್ಯ ದೇವಿಯ ಚಿತ್ರಗಳನ್ನು ಹಂಚಿಕೊಂಡಿದ್ದು, ‘ದೇವರಿಗೆ ಗೊತ್ತು, ಅಷ್ಟೇ ಸಾಕು’ ಎಂದು ಬರೆದುಕೊಂಡಿದ್ದಾರೆ. ತಮ್ಮ ಒಳ್ಳೆಯತನ ಹಾಗೂ ವ್ಯಕ್ತಿತ್ವವನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ. ಅದು ದೇವರಿಗೆ ಗೊತ್ತಿದ್ದರೆ ಸಾಕು ಎಂಬ ಅರ್ಥದಲ್ಲಿ ಈ ಪೋಸ್ಟ್ ಮಾಡಲಾಗಿದೆ ಎಂದು ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ.
ಇದರ ಜೊತೆಗೆ ಪೋಸ್ಟ್ನ ಹಿನ್ನೆಲೆಯಲ್ಲಿ ‘ಎಲ್ಲಿಗೆ ಓಡುವೆ ಓ ಮನುಜ, ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ’ ಎಂಬ ಹಾಡನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ವಿಜಯಲಕ್ಷ್ಮಿ ಅವರು ಯಾರಿಗೆ ಅಥವಾ ಯಾವ ವಿಚಾರಕ್ಕೆ ಈ ರೀತಿಯ ಪರೋಕ್ಷ ಸಂದೇಶ ನೀಡಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಧನ್ವೀರ್ ಜೊತೆ ಮನಸ್ತಾಪದ ಸುದ್ದಿಗಳ ನಡುವೆ ಪೋಸ್ಟ್
ಇತ್ತೀಚೆಗೆ ದರ್ಶನ್ ಅವರ ಆಪ್ತ ಹಾಗೂ ಸಹೋದರನಂತಿರುವ ಧನ್ವೀರ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳ ನಡುವೆಯೇ ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಪೋಸ್ಟ್ ಕುತೂಹಲ ಮೂಡಿಸಿದೆ.
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ‘ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ, ವ್ಯಕ್ತಿಯಾಗಲಿ’ ಎಂಬರ್ಥದ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಬಳಿಕ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ಮನಸ್ತಾಪದ ಬಗ್ಗೆ ಚರ್ಚೆಗಳು ನಡೆದಿದ್ದವು.
ನಂತರ ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ಧನ್ವೀರ್ ಕೂಡ ಇದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವಿನ ಮನಸ್ತಾಪದ ಸುದ್ದಿಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿತ್ತು.
ಇದೀಗ ವಿಜಯಲಕ್ಷ್ಮಿ ಮತ್ತೊಮ್ಮೆ ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ಆದರೆ ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಮಾಡಲಾಗಿದೆ ಎಂಬುದನ್ನು ವಿಜಯಲಕ್ಷ್ಮಿ ಅವರು ಸ್ಪಷ್ಟಪಡಿಸಿಲ್ಲ.



