No menu items!
13.9 C
Munich
Wednesday, April 29, 2026

ಅಪ್ಪ ಆಗೋದು ಸುಲಭ..! ಅಮ್ಮ ಆಗೋದಲ್ಲ..!

Must read

ಮದುವೆಯಾಗಿ ಇದು ನಾಲ್ಕನೇ ವರ್ಷ, ಮಗು ಕೊಡೋ ವಿಚಾರದಲ್ಲಿ ದೇವ್ರು ಸ್ವಲ್ಪ ಆಟ ಆಡಿಸಿದ್ದು ನಿಜವಾದ್ರೂ ಇವತ್ತು ನಾನು ಅಪ್ಪ, ನನ್ನಾಕೆ ಅಮ್ಮ..! ಆದ್ರೆ ಅಪ್ಪ ಆಗೋದು ಸುಲಭವಾದ್ರೂ, ಅಮ್ಮ ಆಗೋದು ಅಷ್ಟು ಸುಲಭ ಅಲ್ಲ..!
ಅವತ್ತು ಗುರುವಾರ ಬೆಳಗ್ಗೆ ಎಂದಿನಂತೆ ಮತ್ತೊಮ್ಮೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಕೊಂಡ್ಲು ನನ್ನಾಕೆ, ಈ ಹಿಂದೆ ಆ ಟೆಸ್ಟಲ್ಲಿ ಯಾವುತ್ತೂ ಎರಡು ಗೆರೆಗಳು ಬಂದಿರಲೇ ಇಲ್ಲ..! ಆದ್ರೂ ಅವಳು ಪ್ರತೀ ತಿಂಗಳೂ ತಪ್ಪದೇ ಟೆಸ್ಟ್ ಮಾಡ್ತಿದ್ಲು..! ಅವತ್ತು ಬಾತ್ ರೂಮ್ ಒಳ್ಗೆ ಹೋದವಳು ಹೊರಗೆ ಬಂದಾಗ ಅವಳ ಕಣ್ಣಲ್ಲಿ ತುಂಬಿದ್ದ ನೀರು, ಅರಳಿದ ಮುಖ ಎರಡೂ ಇನ್ನೂ ನನ್ನ ಕಣ್ಣ ಮುಂದಿದೆ. ಹೌದು ಅವತ್ತು ಆ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮೇಲೆ ಎರಡು ಗೆರೆ ಬಂದಿತ್ತು..! ನನ್ನನ್ನು ಪ್ರೀತಿಯಿಂದ ಕೀರ್ ಅಂತ ಕರೆಯೋ ನನ್ನಾಕೆ, ಅವತ್ತು `ಕೀರ್, ಟೆಸ್ಟ್ ಪಾಸಿಟಿವ್ ಕಣೋ, ನೀನು ಅಪ್ಪ ಆಗ್ತಿದೀಯ ಅಂದಾಗ, ಇಬ್ಬರೂ ಅಪ್ಪಿಕೊಂಡು ಖು‍ಷಿಯಲ್ಲಿ ಕಣ್ಣೀರಾಗಿದ್ವಿ..! ಅದಾದ ಮೇಲೆ ಅವಳನ್ನು ಆರೈಕೆ ಮಾಡೋದು ನನ್ನ ಕೆಲಸ, ನಮ್ಮ ಮಗುವಿನ ಆರೈಕೆ ಅವಳ ಕೆಲಸ..! ಪ್ರತಿದಿನ ಅವಳು ವಾಂತಿ ಮಾಡಿ ಮಾಡಿ ಸುಸ್ತಾಗಿಬಿಡ್ತಿದ್ಲು. ನಂಗಾಗ್ತಿಲ್ಲ, ನಂಗಾಗ್ತಿಲ್ಲ ಅಂತ ಸುಸ್ತಾಗಿ ಮಲಗಿಬಿಡೋಳು. ಅವಳು ಆಗಲೇ `ಅಮ್ಮ’ ಅಂತ ಹೇಳಿಸಿಕೊಳ್ಳೊ ದಿನಕ್ಕೋಸ್ಕರ ಕಷ್ಟ ಅನುಭವಿಸೋಕೆ ಶುರು ಮಾಡಿದ್ಲು. ಆದ್ರೆ ನಾನು ಸಹ ಅಪ್ಪ ಅನ್ನಿಸ್ಕೊಳೋನಾದ್ರೂ, ನನ್ನ ದಿನನಿತ್ಯದ ಬದುಕಲ್ಲಿ ಅಂತಹಾ ವ್ಯತ್ಯಾಸ ಕಾಣಲಿಲ್ಲ..! ದಿನೇದಿನೇ ಹೊಟೇ ದಪ್ಪ ಆಗ್ತಾ ಬಂತು, ಆ ಕ್ಷಣವನ್ನು ತುಂಬಾ ಆನಂದಿಸ್ತಾ ಇದ್ದಳಾದ್ರೂ ಅವಳು ಗರ್ಭಾವಸ್ಥೆಯಲ್ಲಿ ಒದ್ದಾಡಿದ ರೀತಿ ನೆನಸ್ಕೊಂಡ್ರೆ ಭಯ ಆಗುತ್ತೆ. ಯಾವತ್ತೂ ಏಳೆಂಟು ಗಂಟೆ ಕಮ್ಮಿ ಏಳದವಳು ಆರು ಗಂಟೆಗೇ ಎದ್ದು ವಾಕಿಂಗ್ ಹೋಗೋಳು. ಕಂಡಿದ್ದೆಲ್ಲಾ ತಿನ್ನಬೇಕು ಅಂತಿದ್ದವಳು ಮಗುವಿಗೆ ಇದು ಒಳ್ಳೇದು, ಅದು ಒಳ್ಳೇದು ಅಂತ ಅದೇನೇನೋ ಆಸೆ ಕೈಬಿಟ್ಲು..! ಪ್ರತಿ ಸಲ ಸ್ಕ್ಯಾನ್ ಮಾಡಿಸಿಕೊಳ್ಳೋಕೆ ಹೋದಾಗ್ಲೂ `ಪಾಪು ಚೆನ್ನಾಗಿರುತ್ತಲ್ವಾ ಕೀರ್, ಹಾರ್ಟ್ ಬೀಟ್ ಸರಿ ಇರುತ್ತಲ್ವಾ..?’ ಅಂತ ಹೆದರೆದರಿ ಹೋಗೋಳು. ಅದೆಲ್ಲಾ ಮುಗಿಸಿ ಕೊನೆಗೆ ಆ ದಿನ್ ಬಂದೇ ಬಿಡ್ತು..! ನನ್ನಾಕೆಗೆ ಹೆರಿಗೆ ನೋವು..!
ಸಹಕಾರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಳನ್ನು ಸೇರಿಸ್ದೆ. ಬೆಳಗ್ಗೆ ಆರು ಗಂಟೆಗೆ ನೋವು ತಿನ್ನೋಕೆ ಶುರು ಮಾಡಿದವಳು ರಾತ್ರಿ ಎಂಟು ಗಂಟೆ ತನಕ ನಾರ್ಮಲ್ ಡೆಲಿವರಿ ಆಗ್ಬೇಕು ಅನ್ನೋ ಆಸೆಯಲ್ಲಿ ಯಮಯಾತನೆ ಅನುಭವಿಸಿಬಿಟ್ಲು. ಒದ್ದಾಡಿ ಒದ್ದಾಡಿ ಕಣ್ಣೀರು ಹಾಕ್ತಿದ್ರೆ ನನಗೇ ಗೊತ್ತಿಲ್ಲದೇ ನನ್ನ ಕಣ್ಣುಗಳೂ ತೇವವಾಗಿತ್ತು..! ಕೊನೆಗೆ ನಾರ್ಮಲ್ ಡೆಲಿವರಿ ಕಷ್ಟ ಇದೆ, ಮಗುವಿನ ಹಾರ್ಟ್ ಬೀಟ್ ಸಹ ಕಮ್ಮಿ ಆಗ್ತಿದೆ ಅಂತ ಡಾಕ್ಟರ್ ಹೇಳಿದಾಗ ಇಬ್ಬರೂ ಬಿಕ್ಕಿಬಿಕ್ಕಿ ಅತ್ತುಬಿಟ್ವಿ..! ಇನ್ನು ತಡಮಾಡೋದು ಬೇಡ ಅಂತ ಸಿಸೇರಿಯನ್ ಗೆ ಒಪ್ಪಿಕೊಂಡ್ವಿ..! ಹೆದರಬೇದ ಕೀರ್ ಏನಾಗಲ್ಲ ಅಂತ ನನಗೇ ಧೈರ್ಯ ಹೇಳಿ ಆಪರೇಶನ್ ಥಿಯೇಟರ್ ಗೆ ಹೋದವಳು ಅವಳು ವಾಪಸ್ ಬರುವ ಮುಂಚೆಯೇ ನನ್ನ ಮಗನ ದರ್ಶನ ಮಾಡಿಸಿದ್ಲು..! ನರ್ಸ್ ಹೊರಗೆ ಬಂದು, ಗಂಡು ಮಗು, ಮೂರು ಕೇಜಿ ಮುನ್ನೂರು ಗ್ರಾಮ್ ಇದ್ದಾನೆ ಅಂತ ಹೇಳುವಾಗ ನನಗಾದ ಸಂತೋಷಕ್ಕೆ ಏಕೈಕೆ ಕಾರಣ ನನ್ನಾಕೆ..! ನಾನಿವತ್ತು ಸುಲಭವಾಗಿ ಅಪ್ಪ ಆಗ್ಬಿಟ್ಟೆ, ಆದ್ರೆ ಅವಳು ಅಮ್ಮ ಆಗೋಕೆ, ನನ್ನನ್ನು ಅಪ್ಪನಾಗಿಸೋಕೆ ಒದ್ದಾಡಿದ್ದು, ಅನುಭವಿಸಿದ್ದು ನೆನಸ್ಕೊಂಡ್ರೆ ಮೈ ಜುಂ ಅನ್ನುತ್ತೆ..! ಇನ್ನೂ ಇಂಜೆಕ್ಷನ್ ಎಫೆಕ್ಟಲ್ಲೇ ಇದ್ದ ನನ್ನ ಮಡದಿ, ಸ್ಟ್ರೆಚರ್ ನಲ್ಲಿ ಮಲಗಿ ಹೊರಗೆ ಬರುವಾಗ ಕೇಳಿದ್ಲು. `ಮಗು ನೋಡಿದ್ಯಾ..? ಖುಷಿ ಆಯ್ತಾ..?’ ನನಗೆ ಆ ಸಂತೋಷ ಕೊಡೋಕೆ ಆ ಮಹಾತಾಯಿ ಸತ್ತು ಹುಟ್ಟಿ ಬಂದಿದ್ಲು. ಹೊಟ್ಟೆಯ ಮೇಲೆ ಅಷ್ಟುದ್ದ ಕುಯ್ಸಿಕೊಂಡರೂ ಅವಳಿಗೆ ಅದೆಂತದ್ದೋ ಧನ್ಯಭಾವ..! ಇವತ್ತಿಗೂ ಆ ಶಸ್ತ್ರಚಿಕಿತ್ಸೆಯ ನೋವು ಅವಳನ್ನು ಬಾಧಿಸುತ್ತಿದೆ. ಆದ್ರೆ ಆ ಮಗುವನ್ನು ನೋಡಿ ಆ ನೋವು ಮರೀತಿದ್ದಾಳೆ..! ಪ್ರತಿ ತಾಯಿಯೂ ಇದೆಲ್ಲಾ ಅನುಭವಿಸಿರ್ತಾಳೆ, ಆದ್ರೆ ಮೊದಲ ಸಲ ಹತ್ತಿರದಿಂದ ನೋಡಿ ತಾಯಿಯಾಗೋ ಕಷ್ಟ ಅರ್ಥ ಆಗಿದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಮಗುವನ್ನು ಕೈಗಿಟ್ಟು ನನ್ನನ್ನು ಅಪ್ಪನ್ನ ಸ್ಥಾನಕ್ಕೆ ಬಡ್ತಿ ನೀಡಿದ ನನ್ನ ಮುದ್ದು ಮಡದಿ ಅರ್ಪಿತಾಗೆ ಕೋಟಿಕೋಟಿ ನಮ..! ಆದ್ರೂ ಒಂದಂತೂ ಸತ್ಯ…ಅಪ್ಪ ಆಗೋದು ಸುಲಭ..! ಅಮ್ಮ ಆಗೋದಲ್ಲ..!

  • ಕೀರ್ತಿ ಶಂಕರಘಟ್ಟ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article