ಕಾವೇರಿ ಕೊಳ್ಳದ ರೈತರ ಪಾಲಿಗೆ ಮತ್ತೊಮ್ಮೆ ಜಲಕಂಠಕ ಎದುರಾಗಿದೆ. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಸರಿಯಾಗಿ ಮಳೆಯಾಗದೇ ಗಂಭೀರ ಸ್ವರೂಪದ ಬರ ಪರಿಸ್ಥಿತಿ ತಲೆದೋರಿದೆ. ಇಂತಹ ಕಷ್ಟಕರ ಸನ್ನಿವೇಶದಲ್ಲೂ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದು ಕರುನಾಡಿನ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ತೀರ್ಪು ಮಂಡ್ಯ ಹಾಗೂ ಮೈಸೂರು ಭಾಗದ ಜನರ ಹೊಟ್ಟೆಗೆ ಹೊಡೆಯುವಂತಿದ್ದು, ಸ್ಥಳೀಯರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ಬೆಳೆಗಳೆಲ್ಲಾ ಒಣಗಿ ಬೂದಿಯಾಗ್ತಿವೆ : ಕೆಆರ್‌ಎಸ್‌ನಲ್ಲಿ ಉಳಿದಿರೋದು ಬರೀ 12 ಟಿಎಂಸಿ
ಒಂದೆಡೆ ಮಳೆ ಇಲ್ಲದೆ ರೈತರು ಸಾಲ ಸೋಲ ಮಾಡಿ ಬಿತ್ತಿದ್ದ ಬೆಳೆಗಳೆಲ್ಲಾ ಕಣ್ಣೆದುರಲ್ಲೇ ಒಣಗಿ ಹೋಗುತ್ತಿವೆ. ಮತ್ತೊಂದೆಡೆ ಜಲಾಶಯದಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಸ್ತುತ ಕೃಷ್ಣರಾಜ ಸಾಗರ ಜಲಾಶಯದಲ್ಲಿ (KRS) ಬಳಕೆಗಾಗಿ ಲಭ್ಯವಿರುವುದು ಕೇವಲ 12 ಟಿಎಂಸಿ ನೀರು ಮಾತ್ರ. ಆದರೆ ಸಮಿತಿಯ ಹೊಸ ಆದೇಶದಂತೆ ಮುಂದಿನ 15 ದಿನಗಳಲ್ಲಿ ಬರೊಬ್ಬರಿ 4.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಗಿದೆ.
ಮಂಡ್ಯದಲ್ಲಿ ಶೇ.83ರಷ್ಟು ಮಳೆ ಕೊರತೆ: ಕುಡಿಯುವ ನೀರಿಗೂ ಶುರುವಾಯ್ತು ಹಾಹಾಕಾರ
ಮಂಡ್ಯ ಜಿಲ್ಲೆಯೊಂದರಲ್ಲೇ ಶೇ.83ರಷ್ಟು ಭೀಕರ ಮಳೆ ಅಭಾವ ಉಂಟಾಗಿದ್ದು, ಜಿಲ್ಲೆಯ 7 ತಾಲೂಕುಗಳು ಈಗಾಗಲೇ ಸಂಪೂರ್ಣ ಬರಪೀಡಿತ ಎಂದು ಘೋಷಣೆಯಾಗಿವೆ. ಜಲಾಶಯದಲ್ಲಿರುವ ಅಲ್ಪಸ್ವಲ್ಪ ನೀರನ್ನು ತಮಿಳುನಾಡಿಗೆ ಹರಿಸಿದರೆ, ಮುಂದಿನ ದಿನಗಳಲ್ಲಿ ಕೇವಲ ಕೃಷಿಗಷ್ಟೇ ಅಲ್ಲ, ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು ಮತ್ತು ರಾಮನಗರ ಭಾಗಗಳಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ಹೊಸ ಬೆಳೆ ಬಿತ್ತಬೇಡಿ ಎಂದಿದ್ದ ಸರ್ಕಾರ: ಕದ್ದುಮುಚ್ಚಿ ನೀರು ಬಿಟ್ಟಿದ್ದಕ್ಕೆ ಆಕ್ರೋಶ
ಜಿಲ್ಲೆಯಲ್ಲಿ ನೀರಿನ ಗಂಭೀರ ಪರಿಸ್ಥಿತಿ ಇರುವುದನ್ನು ಮನಗಂಡಿದ್ದ ರಾಜ್ಯ ಸರ್ಕಾರ, ರೈತರು ಯಾರೂ ಈ ಬಾರಿ ಹೊಸ ಬೆಳೆಗಳ ಬಿತ್ತನೆ ಮಾಡಬೇಡಿ ಎಂದು ಮನವಿ ಮಾಡಿತ್ತು. ಆದರೆ ರಾಜ್ಯದ ರೈತರಿಗೆ ನೀರಿಲ್ಲ ಎಂದು ಕೈಚೆಲ್ಲಿದ ಸರ್ಕಾರ, ತಮಿಳುನಾಡಿನ ಬೆಳೆಗೆ ನೀರು ಹರಿಸಲು ಹೊರಟಿರುವುದು ‘ಕರುನಾಡಿಗೆ ಬರೆ ಎಳೆದಂತೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಾಶಯದ ವಾಸ್ತವ ಸ್ಥಿತಿ ಅರಿಯದೇ ನೀಡಿರುವ ಈ ಆದೇಶದ ವಿರುದ್ಧ ಮಂಡ್ಯದ ರೈತ ಪಡೆ ಉಗ್ರ ಹೋರಾಟಕ್ಕೆ ಸಜ್ಜಾಗಿದೆ.
ತೀರ್ಮಾನ ನಮಗೆ ಸಮಾಧಾನ ತಂದಿಲ್ಲ, ಅಪೀಲ್ ಹೋಗ್ತೇವೆ: ಸಚಿವ ರಾಮಲಿಂಗಾರೆಡ್ಡಿ
ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನಕ್ಕೆ ಸರ್ಕಾರದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಸಮಿತಿ ನೀಡಿರುವ ಈ ತೀರ್ಮಾನ ನಮಗೆ ಸಮಾಧಾನ ತಂದಿಲ್ಲ. ಸಿಎಂ ಅವರ ನಿರ್ದೇಶನದಂತೆ ನಾವು ತಕ್ಷಣವೇ ಮರುಪರಿಶೀಲನಾ ಅರ್ಜಿ (ಅಪೀಲ್) ಸಲ್ಲಿಸುತ್ತೇವೆ. ಡೆಡ್ ಸ್ಟೋರೇಜ್ ಹೊರತುಪಡಿಸಿ ಕುಡಿಯುವ ನೀರನ್ನು ಕಾಯ್ದುಕೊಳ್ಳುವುದು ನಮಗೆ ಮೊದಲ ಆದ್ಯತೆ. ಬೆಂಗಳೂರು, ಮಂಡ್ಯ, ರಾಮನಗರ ಜನರಿಗೆ ಕುಡಿಯುವ ನೀರು ಉಳಿಸಿಕೊಳ್ಳಲು ಹೋರಾಡುತ್ತೇವೆ ಎಂದಿದ್ದಾರೆ.
ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಮೋಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ
ಮತ್ತೊಂದೆಡೆ ಈ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಖಂಡಿಸಿ ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಘೋಷಿಸಿದ್ದಾರೆ. ರಾತ್ರೋರಾತ್ರಿ ಕದ್ದುಮುಚ್ಚಿ ನೀರು ಬಿಟ್ಟು ತಮಿಳುನಾಡು ಸಿಎಂ ಖುಷಿ ಪಡಿಸಲು ನಮ್ಮ ಸಿಎಂ ರಾಜ್ಯದ ರೈತರಿಗೆ ಅನ್ಯಾಯ ಮಾಡಿದ್ದಾರೆ. ರೈತರ ಜೊತೆ ಕಪಟ ನಾಟಕವಾಡುವುದನ್ನು ಬಿಟ್ಟು ತಕ್ಷಣವೇ ರಿವಿಷನ್ ಪಿಟಿಷನ್ ಹಾಕಿ ಎಂದು ಅವರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲೇ ಮಲಗಿ ರೈತರ ಧರಣಿ: ಮೈಸೂರಲ್ಲಿ ದಿಢೀರ್ ರಸ್ತೆ ತಡೆ, ಚಕ್ಕಾ ಜಾಮ್
ಕಾವೇರಿ ಕಿಚ್ಚು ಈಗಾಗಲೇ ರಸ್ತೆಗಿಳಿದಿದ್ದು, ಮೈಸೂರಿನಲ್ಲಿ ರೈತರು ದಿಢೀರ್ ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ನೂರಾರು ರೈತರು ರಸ್ತೆಯಲ್ಲೇ ಮಲಗಿ ವಾಹನ ಸಂಚಾರ ತಡೆದು ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿಗೆ ಒಂದು ಹನಿ ನೀರನ್ನೂ ಹರಿಸಬಾರದು ಎಂದು ಪಟ್ಟು ಹಿಡಿದಿರುವ ರೈತ ಸಂಘಟನೆಗಳು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಇಡೀ ಹಳೆ ಮೈಸೂರು ಭಾಗವನ್ನು ಸ್ತಬ್ಧಗೊಳಿಸುವುದಾಗಿ ಎಚ್ಚರಿಸಿವೆ.
ಮಂಡ್ಯದಲ್ಲಿ ‘ಕಾವೇರಿ’ದ ಕಿಚ್ಚು
ಇನ್ನೊಂದೆಡೆ ಸಕ್ಕರೆನಾಡು ಮಂಡ್ಯದಲ್ಲಿ ಹೋರಾಟ ತೀವ್ರಗೊಂಡಿದೆ. ಮಂಡ್ಯದ ಸಂಜಯ್ ವೃತ್ತದಲ್ಲಿ ಕನ್ನಡ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸಿದೆ. ಕರವೇ ಜಿಲ್ಲಾಧ್ಯಕ್ಷ ವೇಣು ಡಿ.ಎಸ್. ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು, ತಲೆಯ ಮೇಲೆ ಕಲ್ಲು ಒತ್ತಿ, ಖಾಲಿ ಕೊಡ, ಒಣಗಿದ ಕಬ್ಬು ಹಿಡಿದು ಆಕ್ರೋಶ ಹೊರಹಾಕಿದ್ದು, ಪ್ರಾಣ ಬಿಟ್ಟೇವು, ನೀರು ಬಿಡಲ್ಲ ಎಂದು ಘೋಷಣೆ ಕೂಗಿದ್ದಾರೆ.



