No menu items!
12.5 C
Munich
Tuesday, April 28, 2026

ಬೆಂಗಳೂರಿನಲ್ಲಿ ನಡೆದ ಮದುವೆಗೆ ಬಂದು 1 ಕೋಟಿ ಚಿನ್ನಾಭರಣ ಕಳ್ಕೊಂಡ NRI ವೈದ್ಯೆ

Must read

ಮದುವೆ ಅಂದರೆ ಬರಿ ಸಂಭ್ರಮವಲ್ಲ, ಅದೊಂದು ಭಾವನಾತ್ಮಕ ಸಮ್ಮಿಲನ. ನೆಂಟರಿಷ್ಟರ ಸಡಗರ, ಭರ್ಜರಿ ಊಟೋಪಚಾರ, ಮಿನುಗುವ ರೇಷ್ಮೆ ಸೀರೆಗಳು ಮತ್ತು ಮೈತುಂಬಾ ಹೊಳೆಯುವ ಚಿನ್ನಾಭರಣಗಳು ಆ ಸಂಭ್ರಮಕ್ಕೆ ಮೆರುಗು ನೀಡುತ್ತವೆ. ಇಂತಹ ಸುಂದರ ಕ್ಷಣಗಳಿಗಾಗಿಯೇ ವಿದೇಶದಲ್ಲಿರೋ ಅನಿವಾಸಿ ಭಾರತೀಯರು (NRI) ಕೆಲಸಕ್ಕೆ ರಜೆ ಹಾಕಿ ಸಾವಿರಾರು ಮೈಲಿ ದೂರದಿಂದ ಓಡಿ ಬರುತ್ತಾರೆ.

ಆದರೆ, ಕೋಟಿ ಕೋಟಿ ಹಣ ಖರ್ಚು ಮಾಡಿ ಮಾಡುವ ಇಂತಹ ಅದ್ದೂರಿ ಮದುವೆಗಳ ಮೇಲೆ ಕಳ್ಳರ ಕಣ್ಣು ಕೂಡ ಬಿದ್ದಿರುತ್ತದೆ ಅನ್ನೋದೇ ಆತಂಕದ ವಿಷಯ. ಮದುವೆ ಮಂಟಪದ ಸಡಗರದ ನಡುವೆ ಒಂದು ಸಣ್ಣ ಅಜಾಗರೂಕತೆ ಇಡೀ ಜೀವನದ ಗಳಿಕೆಯನ್ನೇ ಕಸಿದುಕೊಳ್ಳಬಹುದು. ಅಂತಹದ್ದೇ ಒಂದು ಆಘಾತಕಾರಿ ಘಟನೆ ಈಗ ಬೆಂಗಳೂರಿನಲ್ಲಿ ನಡೆದಿದೆ.

ಮದುವೆ ಸಂಭ್ರಮದಲ್ಲಿ ‘ಕೋಟಿ’ ಲೂಟಿ: ಎನ್‌ಆರ್‌ಐ ವೈದ್ಯೆಯ ಒಂದು ಕೋಟಿ ಮೌಲ್ಯದ ಚಿನ್ನ ಮಾಯ!


ಅಕ್ಕನ ಮಗನ ಮದುವೆಯಲ್ಲಿ ಭಾಗವಹಿಸಲು ಅಮೆರಿಕದಿಂದ ಅತೀವ ಸಂಭ್ರಮದಿಂದ ಬಂದಿದ್ದ ವೈದ್ಯೆಯೊಬ್ಬರಿಗೆ ಬೆಂಗಳೂರಿನಲ್ಲಿ ಭೀಕರ ಅನುಭವವಾಗಿದೆ. ಪೂರ್ವ ಬೆಂಗಳೂರಿನ ಮದುವೆ ಮಂಟಪವೊಂದರಲ್ಲಿ ಅನಿವಾಸಿ ಭಾರತೀಯ ವೈದ್ಯೆ ಶ್ರೀದೇವಿ ಅವರ ಬರೋಬ್ಬರಿ 1.12 ಕೋಟಿ ರೂಪಾಯಿ ಮೌಲ್ಯದ 725 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿವೆ.

ನಡೆದಿದ್ದೇನು?


ಏಪ್ರಿಲ್ 18ರಂದು ಭಾರತಕ್ಕೆ ಬಂದಿದ್ದ ಶ್ರೀದೇವಿ ಅವರು ಗಂಗಾನಗರದಲ್ಲಿ ತಂಗಿದ್ದರು. ಏಪ್ರಿಲ್ 22ರಂದು ಕಟಮ್ನಲ್ಲೂರಿನ ಎಸ್‌ಡಿಪಿ ಪ್ಯಾಲೇಸ್‌ನಲ್ಲಿ ನಡೆದ ಆರತಕ್ಷತೆ ವೇಳೆ ಈ ಘಟನೆ ನಡೆದಿದೆ. ಸಂಜೆ ಸುಮಾರು 6:30ಕ್ಕೆ ಶ್ರೀದೇವಿಯವರ ಸಹೋದರ ಅವರಿಗೆ ಚಿನ್ನಾಭರಣಗಳಿದ್ದ ಬಾಕ್ಸ್ ನೀಡಿದ್ದರು. ಅದರಲ್ಲಿ ಕೆಲವು ಒಡವೆಗಳನ್ನು ಧರಿಸಿದ ಶ್ರೀದೇವಿ, ಉಳಿದವುಗಳನ್ನು ಬ್ಯಾಗ್‌ನಲ್ಲಿಟ್ಟು ತಮಗೆ ನೀಡಲಾಗಿದ್ದ ಮದುವೆ ಮನೆಯ ರೂಮಿನಲ್ಲಿಟ್ಟು ಲಾಕ್ ಮಾಡಿ ಹೋಗಿದ್ದರು. ಆದರೆ ರಾತ್ರಿ 11:30ಕ್ಕೆ ಕಾರ್ಯಕ್ರಮ ಮುಗಿಸಿ ರೂಮಿಗೆ ವಾಪಸ್ ಬಂದಾಗ ಶ್ರೀದೇವಿಯವರಿಗೆ ಶಾಕ್ ಕಾದಿತ್ತು. ರೂಮಿನಲ್ಲಿದ್ದ ಚಿನ್ನದ ಬ್ಯಾಗ್ ಕಾಣೆಯಾಗಿತ್ತು.


ಕಳ್ಳತನವಾದ ಆಭರಣ ಪಟ್ಟಿ

300 ಗ್ರಾಂ ತೂಕದ ಎರಡು ಜುಮ್ಕಿಗಳು

200 ಗ್ರಾಂ ತೂಕದ ನಾಣ್ಯದ ಹಾರ

200 ಗ್ರಾಂ ತೂಕದ ಸೊಂಟದ ಪಟ್ಟಿ (ಡಾಬು)

25 ಗ್ರಾಂ ತೂಕದ ಇತರೆ ಒಡವೆಗಳು ಸೇರಿವೆ.

ಪೊಲೀಸ್ ತನಿಖೆ ಮತ್ತು ಅನುಮಾನ

ತಕ್ಷಣವೇ ಕುಟುಂಬದವರಿಗೆ ವಿಷಯ ತಿಳಿಸಿದ ಶ್ರೀದೇವಿ, ಪೊಲೀಸರಿಗೆ ದೂರು ನೀಡಿದ್ದಾರೆ. “ನಾನು ರೆಡಿಯಾಗುವಾಗ ರೂಮಿಗೆ ಸಿಬ್ಬಂದಿಯೊಬ್ಬರು ಬಂದಿದ್ದರು, ಅವರ ಮೇಲೆ ಅನುಮಾನವಿದೆ” ಎಂದು ಅವರು ಹೇಳಿದ್ದಾರೆ. ಆದರೆ ಆವಲಹಳ್ಳಿ ಪೊಲೀಸರು ಮಾತ್ರ ಬೇರೆಯದೇ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ರೂಮಿನ ಕೀ ಶ್ರೀದೇವಿ ಅವರ ಬಳಿಯೇ ಇದ್ದಿದ್ದರಿಂದ, ಕಳ್ಳತನದಲ್ಲಿ ಕುಟುಂಬದವರು ಅಥವಾ ನಿಕಟವರ್ತಿಗಳ ಕೈವಾಡವಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ.

ಮದುವೆ ಮಂಟಪದ ಮ್ಯಾನೇಜರ್ ಪ್ರಭು ಅವರು ನಮ್ಮ ಸಿಬ್ಬಂದಿ ಯಾರೂ ಈ ಕೃತ್ಯ ಎಸಗಿಲ್ಲ ಎಂದು ವಾದಿಸುತ್ತಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೋಟಿ ಮೌಲ್ಯದ ಆಭರಣ ಕಳೆದುಕೊಂಡ ವೈದ್ಯೆ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

- Advertisement -spot_img

More articles

- Advertisement -spot_img

Latest article