No menu items!
13.9 C
Munich
Thursday, May 7, 2026

Exclusive ; ಮದುವೆ-ನಂಬಿಕೆ ದ್ರೋಹ-ನರಕಯಾತನೆ ; ಮಗಳ ಎದುರು ದಾಂಪತ್ಯ ಜೀವನದ ಕಹಿ ಸತ್ಯ ಹಂಚಿಕೊಂಡು ಬಿಕ್ಕಿದ ವಾಣಿಶ್ರೀ

Must read

ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ. ಅದೊಂದು ಪರಸ್ಪರ ನಂಬಿಕೆ, ಗೌರವ ಮತ್ತು ಪ್ರೀತಿಯ ಮೇಲೆ ನಿರ್ಮಾಣವಾಗುವ ಪವಿತ್ರವಾದ ಗೋಪುರ. ಆದರೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಈ ಗೋಪುರಕ್ಕೆ ನಂಬಿಕೆ ದ್ರೋಹದ ಗೆದ್ದಲು ಹಿಡಿಯುತ್ತಿದೆ.

ಲವ್ ಮ್ಯಾರೇಜ್ ಇರಲಿ.. ಅರೆಂಜ್ ಮ್ಯಾರೇಜ್ ಇರಲಿ.. ಭಾವನಾತ್ಮಕವಾದ ದ್ರೋಹವನ್ನು ಇಲ್ಲಿ ಹಲವರು ಮಾಡುತ್ತಲೇ ಇದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ದಿನಕ್ಕೊಂದು ಕಥೆಗಳನ್ನು ನಾವು ನಮ್ಮ ಸುತ್ತ ಮುತ್ತ ನೋಡುತ್ತಲೇ ಇದ್ದೇವೆ.

ಇನ್ನೂ ಬಣ್ಣದ ಲೋಕ ಅಂದರೆ ಸಾಮಾನ್ಯರ ಪಾಲಿಗೆ ಅದೊಂದು ಝಗಮಗಿಸುವ ಪ್ರಪಂಚ. ಅದ್ಭುತವಾದ ಮಾಯಾಜಾಲ. ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಜನ ಸಿನಿಮಾದವರು ಎನ್ನುವ ಪರಿಕಲ್ಪನೆ ಹಲವರಲ್ಲಿದೆ. ಆದರೆ ಮಿನುಗುವ ಈ ಲೋಕದಲ್ಲಿ ಕೂಡ ಕಣ್ಣೀರ ಕಥೆಗಳಿವೆ. ನಂಬಿಕೆ ದ್ರೋಹದಿಂದ ನರಳಿದ ವ್ಯಕ್ತಿತ್ವಗಳಿವೆ. ಉದಾಹರಣೆಗೆ ವಾಣಿಶ್ರೀ.

ಹೌದು, ವಾಣಿಶ್ರೀ.. ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರಖ್ಯಾತ ಹೆಸರು. 100ಕ್ಕೂ ಅಧಿಕ ಸಿನಿಮಾ 300ಕ್ಕೂ ಹೆಚ್ಚಿನ ಧಾರಾವಾಹಿಗಳನ್ನು ಮಾಡಿದವರು ಇವರು. ”ಬಿಗ್‌ ಬಾಸ್‌” ಕನ್ನಡ ಸೀಸನ್‌ 4ರ ಸ್ಫರ್ಧಿ ಕೂಡ ಹೌದು.

ಇಂಥಾ ವಾಣಿಶ್ರೀ ತಮ್ಮ ಬದುಕಿನ ಕರಾಳ ಪುಟಗಳನ್ನು ತಿರುವಿ ಹಾಕಿದ್ದಾರೆ. ಮದುವೆ-ನಂಬಿಕೆ ದ್ರೋಹ ನೆನೆದು ಭಾವುಕರಾಗಿದ್ದಾರೆ. ಈ ಕುರಿತು ನಿಮ್ಮ ನೆಚ್ಚಿನ ” ದಿ ನ್ಯೂ ಇಂಡಿಯನ್ ಟೈಮ್ಸ್‌”ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನ ಮಾಡಿದ್ದು ಬೇರೆ ಯಾರು ಬದಲಿಗೆ ಅವರ ಮಗಳು ಖುಷಿ ಅನ್ನೋದು ವಿಶೇ‍ಷ. ಸಂದರ್ಶನವೊಂದರಲ್ಲಿ ಅಮ್ಮ-ಮಗಳು ಮುಖಾಮುಖಿಯಾಗಿದ್ದು ಇದೇ ಮೊದಲ ಬಾರಿ ಅನ್ನೋದು ಮತ್ತೊಂದು ವಿಶೇಷ.

ಹೌದು, ತಮ್ಮ ವೈಯಕ್ತಿಕ ಬದುಕಿನ ಕುರಿತು ತಮ್ಮ ಮಗಳ ಜೊತೆ ಮುಕ್ತವಾಗಿ ”ದಿ ನ್ಯೂ ಇಂಡಿಯನ್ ಟೈಮ್ಸ್‌”ನ  ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ವಾಣಿಶ್ರೀ ”ಮದುವೆ ಆಗೋಣ ಬಾ” ಎಂಬ ಚಿತ್ರ ಮಾಡುತ್ತಿದ್ದ ಸಮಯ ಅದು. ಆ ಸಮಯದಲ್ಲಿ ”ಟೈಮ್ಸ್ ಆಫ್ ಇಂಡಿಯಾ”ದಲ್ಲಿ ನನ್ನ ಬಗ್ಗೆ ಲೇಖನವೊಂದು ಪ್ರಕಟವಾಗಿತ್ತು ಎಂದು ಹೇಳಿದ್ದಾರೆ. ಆ ಲೇಖನದ ಕೊನೆಯಲ್ಲಿ ನನ್ನ ನಂಬರ್ ಕೂಡ ನಮೂದಿಸಲಾಗಿತ್ತು ಎಂದಿದ್ದಾರೆ. ಆ ನಂತರ ಆಗಿದ್ದೇನು..? ವಾಣಿಶ್ರೀ ಮದುವೆಯಾಗಿದ್ಹೇಗೆ..? ಎಂದು ತಿಳಿಯಲು ಮುಂದೆ ಓದಿ.

ತಂದೆಯ ನಿರಾಸಕ್ತಿ- ತಾಯಿಯ ಆತಂಕ

“ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ನನ್ನ ಫೋಟೋ ನೋಡಿ ಸುಮಾರು 15-16 ಮದುವೆ ಪ್ರಪೋಸಲ್‌ಗಳು ಬಂದಿದ್ದವು. ಅನಿಲ್ ಕುಮಾರ್ ಅವರದ್ದು ಕೂಡ ಅದರಲ್ಲಿ ಒಂದಾಗಿತ್ತು. ಅದಕ್ಕೂ ಮುನ್ನ ನನಗೆ ನಮ್ಮ ಸಂಬಂಧಿಕರಲ್ಲಿ ಮತ್ತು ಸ್ನೇಹಿತರ ವಲಯದಲ್ಲಿ ಹಲವರು ಮದುವೆ ಮಾತುಕಥೆ ಮಾಡಿದ್ದರು. ಆದರೆ ನನ್ನ ತಂದೆ ಮುಂದುವರೆಸಿರಲಿಲ್ಲ. ಈ ಹಿನ್ನೆಲೆ ನನ್ನ ತಾಯಿಗೊಂದು ಆತಂಕ ಇತ್ತು. ಆ ಕಾರಣಕ್ಕಾಗಿಯೇ ನನ್ನ ತಾಯಿ ಈ ಮದುವೆಯ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿದರು” ಎಂದು ವಾಣಿಶ್ರೀ ಹೇಳಿದ್ಧಾರೆ.

ವಾಣಿಶ್ರೀ ತಾಯಿಗೆ ಅನಿಲ್ ನೀಡಿದ್ದ ಭರವಸೆ

“ಮನೆಗೆ ಬಂದ ಅನಿಲ್, ನಾನು ನಿಮ್ಮ ಮನೆ ಮಗನಂತೆ ಇರುತ್ತೇನೆ, ನೀವೇನೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಮ್ಮನಿಗೆ ಭರವಸೆ ನೀಡಿದ್ದರು. ಆ ಮಾತುಗಳಿಗೆ ಮರುಳಾಗಿ ನನ್ನಮ್ಮ ಮದುವೆ ಮಾಡಿದರು. ಮದುವೆಗೆ ಮುಂಚೆ ನಾವು ಎಲ್ಲಿಯೂ ಸುತ್ತಾಡಿಲ್ಲ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಅವಕಾಶವೂ ಸಿಗಲಿಲ್ಲ” ಎಂದಿದ್ದಾರೆ ವಾಣಿಶ್ರೀ.

ಮದುವೆ ನಂತರ ಬದಲಾಯ್ತು ವರಸೆ

“ಮದುವೆಗೆ ಮೊದಲು ಅವರಿಗೆ ನನ್ನ ವೃತ್ತಿಯ ಬಗ್ಗೆ ಸಮಸ್ಯೆಯಿರಲಿಲ್ಲ, ಮದುವೆಯಾದ ಮೇಲೂ ಅಭಿನಯಿಸಬಹುದು ಎಂದಿದ್ದರು. ಆದರೆ ಮದುವೆಯಾದ ನಂತರ ವರಸೆಯೇ ಬದಲಾಯಿತು. ನನ್ನನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದರು, ನಟನೆ ಬಿಡುವಂತೆ ಒತ್ತಡ ಹಾಕಲು ಶುರು ಮಾಡಿದರು” ಎಂದು ಆ ದಿನಗಳನ್ನು ವಾಣಿಶ್ರೀ ನೆನೆದಿದ್ಧಾರೆ.

”ಗೌತಮಿ” ಧಾರಾವಾಹಿ, ವೃತ್ತಿ ಬದುಕಿನ ಹಿನ್ನೆಡೆ

“ನಾನು ಖ್ಯಾತಿಯ ಉತ್ತುಂಗದಲ್ಲಿದ್ದಾಗ ‘ಗೌತಮಿ’ ಎಂಬ ಧಾರಾವಾಹಿ ಮಾಡುತ್ತಿದ್ದೆ.ಅಲ್ಲಿ ನನಗೆ ಸಿಗಬೇಕಿದ್ದ ಸಂಭಾವನೆಯನ್ನು ಕೊಟ್ಟಿರಲಿಲ್ಲ. ಸಂಭಾವನೆಯ ವಿಷಯಕ್ಕೆ ನಿರ್ಮಾಪಕರಿಗೆ ಕರೆ ಮಾಡಿ ಅವರೇ ಒರಟಾಗಿ ಮಾತನಾಡಿದರು. ಮನೆಯಲ್ಲಿ ಕಿರಿಕಿರಿ ಹೆಚ್ಚಾದ ಕಾರಣ ಬೇಸತ್ತು ಆ ಧಾರಾವಾಹಿಯಿಂದ ಹೊರಬಂದೆ, ಚಿತ್ರರಂಗದಿಂದಲೇ ದೂರ ಆದೆ” ಎಂದು ವಾಣಿಶ್ರೀ ಹೇಳಿದ್ದಾರೆ.

ಹೀಗೆ  ತಮ್ಮ ಮಗಳು ಖುಷಿ ಜೊತೆ ತಮ್ಮ ಬದುಕಿನ ಕಥೆಯನ್ನು ನಿಮ್ಮ ” ದಿ ನ್ಯೂ ಇಂಡಿಯನ್ ಟೈಮ್ಸ್‌” ಮೂಲಕ   ಹಂಚಿಕೊಂಡಿರುವ ವಾಣಿಶ್ರೀ, ತಮ್ಮ ಸಂಬಂಧ ಎಷ್ಟು ಟಾಕ್ಸಿಕ್ ಆಗಿತ್ತು ಎನ್ನುವುದನ್ನು ಕೂಡ ವಿವರಿಸಿದ್ದಾರೆ. ವಾಣಿಶ್ರೀ ತಮ್ಮ ಸಂದರ್ಶನದಲ್ಲಿ ಹಂಚಿಕೊಂಡ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ವಾಣಿಶ್ರೀ ಮೇಲೆ ಲ್ಯಾಂಡ್ ಲೈನ್ ಮೂಲಕ ಕಣ್ಗಾವಲು

”ಮದುವೆಗೆ ಮುನ್ನ ನನ್ನ ಹತ್ತಿರ ಮೊಬೈಲ್ ಇತ್ತು. ಆದರೆ ಮದುವೆಯ ನಂತರ ನಾನು ಕೇವಲ ಲ್ಯಾಂಡ್ ಲೈನ್ ಮಾತ್ರ ಬಳಸುವಂತೆ ಮಾಡಿದರು. ದುರಂತವೆಂದರೆ, ಆ ಲ್ಯಾಂಡ್ ಲೈನ್ ಅವರ ಆಫೀಸ್‌ಗೆ ಕನೆಕ್ಟ್ ಆಗಿತ್ತು. ನಾನು ಯಾರ ಜೊತೆ ಮಾತನಾಡಿದರೂ ಅವರು ಆಫೀಸ್‌ನಲ್ಲಿ ಕುಳಿತು ಪೂರ್ತಿ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರು” ಎಂದು ವಾಣಿಶ್ರೀ ”ದಿ ನ್ಯೂ ಇಂಡಿಯನ್ ಟೈಮ್ಸ್” ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ಧಾರೆ. ತಾಯಿಯ ಈ ಮನದ ಮಾತುಗಳನ್ನು ಕೇಳಿ, ನೋವು ಕಂಡು ಮಗಳು ಖುಷಿ, ಈ ಕಾಲದಲ್ಲಿ ಇದನ್ನು ಟಾಕ್ಸಿಕ್ ಸಂಬಂಧ ಎನ್ನುತ್ತಾರೆ ಎಂದು ಮಮ್ಮಲ ಮರುಗಿದ್ದಾರೆ

ಅಂದ್ಹಾಗೇ ವಾಣಿಶ್ರೀ ಅವರ ಜೊತೆ ಮದುವೆಯಾಗುವ ಮುನ್ನ ಅದಾಗಲೇ ಅನಿಲ್ ಎಂಬ ವ್ಯಕ್ತಿಗೆ ಮದುವೆಯಾಗಿತ್ತು. ಈ ವಿಚಾರವನ್ನು ಕೂಡ ಮಗಳು ಖುಷಿ ಎದುರು ಪ್ರಸ್ತಾಪ ಮಾಡಿರುವ ವಾಣಿಶ್ರೀ, ಮಾತನಾಡುವ ಜನ ಮಾತನಾಡ್ತಾನೇ ಇರ್ತಾರೆ, ನನ್ನ ಬದುಕಿನ ಕಷ್ಟ ನನಗೆ ಮಾತ್ರ ಗೊತ್ತು ಎಂದು ಹೇಳಿದ್ಧಾರೆ. ಕೋರ್ಟ್‌ನಲ್ಲಿ ಕೇಸ್ ಇದ್ದ ವಿಚಾರ, ನನ್ನ ಮದುವೆಯ ಮುನ್ನ ಮತ್ತೊಂದು ಮದುವೆಯಾದ ವಿಚಾರ, ಎಲ್ಲದಕ್ಕೂ ನನ್ನ ಬಳಿ ಸಾಕ್ಷಿಗಳಿವೆ, ಆ ಸಾಕ್ಷಿಗಳನ್ನು ನಾನು ನಿನಗೆ ತೋರಿಸಿದ್ದೇನೆ ಕೂಡ ಎಂದು ಮಗಳು ಖುಷಿಗೆ ವಾಣಿಶ್ರೀ ಹೇಳಿದ್ದಾರೆ.  ವಾಣಿಶ್ರೀ ಬದುಕಿನ ಈ ಕರಾಳ ಮತ್ತು ಕಹಿ ಸತ್ಯವನ್ನು ಅನಾವರಣ ಮಾಡುವ ” ದಿ ನ್ಯೂ ಇಂಡಿಯನ್ ಟೈಮ್ಸ್‌” ನ ಸಂದರ್ಶನದ ಲಿಂಕ್ ಈ ಕೆಳಗಿದೆ. 

- Advertisement -spot_img

More articles

- Advertisement -spot_img

Latest article