No menu items!
24.7 C
Munich
Saturday, May 2, 2026

ಪ್ರಯಾಣಿಕರ ಗಮನಕ್ಕೆ ; ಸಾರಿಗೆ ನೌಕರರ ಸಂಧಾನ ವಿಫಲ- ಮೇ 20 ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಬಂದ್ ಸಾಧ್ಯತೆ

Must read

ಸಾರಿಗೆ ವ್ಯವಸ್ಥೆ ಅಂದರೆ ಕೇವಲ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವ ವ್ಯವಸ್ಥೆ ಅಲ್ಲ. ಬದಲಿಗೆ ಅಸಂಖ್ಯಾತ.. ಅಗಣಿತ.. ಜನರ ಬದುಕಿನ ಜೀವನಾಡಿ. ಗಲ್ಲಿಯಿಂದ ಹಿಡಿದು ಹಳ್ಳಿಗೆ ತಲುಪುವ ನಮ್ಮ ಕೆಎಸ್‌ಆರ್‌ಟಿಸಿ (KSRTC) ಬಸ್ ಕಣ್ಣೆದುರು ಒಂದು ದಿನ ಕಾಣದಿದ್ದರೆ, ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳುತ್ತೆ. ಸಾಮಾನ್ಯ ಜನರ ಚಿಂತೆ ಹೆಚ್ಚಿಸುತ್ತೆ.

ಆದರೆ ಜನಸಾಮಾನ್ಯರ ಈ ಕಷ್ಟ-ನಷ್ಟ ಸರ್ಕಾರಕ್ಕೂ ಬೇಕಿಲ್ಲ. ಸಾರಿಗೆ ಇಲಾಖೆಗೆ ಕೂಡ ಬೇಕಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ಕಡೆ ಸದ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ನಡುವೆ ಮತ್ತೊಮ್ಮೆ ಸಮರ ಶುರುವಾಗಿದೆ. ಆ ಕಡೆ ಸರ್ಕಾರ ಆರ್ಥಿಕ ಸಂಕಷ್ಟದ ಕುರಿತು ಮಾತನಾಡಿದರೆ , ಈ ಕಡೆ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ಈ ಶೀತಲ ಸಮರ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಸರ್ಕಾರಕ್ಕೆ ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ.

ಹೌದು, ಮೇ 20ರಿಂದ ಕರ್ನಾಟಕದಾದ್ಯಂತ ಸಾರಿಗೆ ಬಸ್‌ಗಳು ರಸ್ತೆಗಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ KSRTC, BMTC, NWKRTC ಮತ್ತು KKRTCಯ ಸುಮಾರು 1.25 ಲಕ್ಷ ನೌಕರರು ಈ ಹೋರಾಟದಲ್ಲಿ ಕೈಜೋಡಿಸುತ್ತಿರುವುದು ಪ್ರಯಾಣಿಕರ ಎದೆಯಲ್ಲಿ ನಡುಕ ಹುಟ್ಟಿಸಿದೆ.


ಬುಧವಾರ ನಡೆದ ಹನ್ನೆರಡನೇ ಸುತ್ತಿನ ಸಂಧಾನ ಸಭೆ ವಿಫಲವಾಗಿರುವುದೇ ಈ ಮುಷ್ಕರಕ್ಕೆ ಅಸಲಿಎ ಕಾರಣ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರವು ಶೇ. 7ರಷ್ಟು ವೇತನ ಹೆಚ್ಚಳದ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಆದರೆ, ನಮಗೆ ಭಿಕ್ಷೆ ಬೇಡ, ನ್ಯಾಯಯುತವಾದ ವೇತನ ನೀಡಿ ಎಂದು ಗುಡುಗಿದ ನೌಕರರ ಸಂಘಟನೆಗಳು ಈ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿವೆ. ಹನ್ನೆರಡು ಬಾರಿ ಮಾತುಕತೆ ನಡೆಸಿದರೂ ಸರ್ಕಾರ ಮಾತ್ರ ನೌಕರರ ಪ್ರಮುಖ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡ್ತಿಲ್ಲ ಅನ್ನೋದು ನೌಕರರ ಆಕ್ರೋಶಕ್ಕೆ ಮುಖ್ಯ ಕಾರಣ.


ಇನ್ನು ನೌಕರರ ಬೇಡಿಕೆಗಳ ಪಟ್ಟಿ ಕೂಡ ತುಂಬಾ ದೊಡ್ಡದಿದೆ. ಆ ಪ್ರಕಾರ ನೋಡುವುದಾದರೆ 2024ರ ಜನವರಿಯಿಂದ ಅನ್ವಯವಾಗುವಂತೆ ಮೂಲ ವೇತನವನ್ನು ಶೇ. 25ರಷ್ಟು ಏರಿಕೆ ಮಾಡಬೇಕು ಎಂಬ ಬೇಡಿಕೆ ಸರ್ಕಾರದ ಮುಂದಿಡಲಾಗಿದೆ. ಇದರ ಜೊತೆಗೆ ಬಾಕಿ ಇರುವ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ಪಾವತಿಸಬೇಕು ಅಂತ ನೌಕರರು ಪಟ್ಟು ಹಿಡಿದಿದ್ದಾರೆ.

ಆದರೆ ಸರ್ಕಾರ ಮಾತ್ರ ಕೇವಲ 26 ತಿಂಗಳ ಬಾಕಿ ಹಣ ನೀಡಲು ಮುಂದಾಗಿದ್ದು, ಈ ಲೆಕ್ಕಾಚಾರದ ಆಟ ನೌಕರರನ್ನು ಮತ್ತಷ್ಟು ಕೆರಳಿಸಿದೆ. ಇಷ್ಟೇ ಅಲ್ಲದೆ, ಶೇ. 31ರಷ್ಟು ತುಟ್ಟಿಭತ್ಯೆಯನ್ನು (DA) ಮೂಲ ವೇತನದಲ್ಲಿ ವಿಲೀನಗೊಳಿಸಬೇಕು ಎಂಬುದು ಜಂಟಿ ಕ್ರಿಯಾ ಸಮಿತಿಯ ಮತ್ತೊಂದು ಪ್ರಮುಖ ಒತ್ತಾಯ. ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ನೌಕರರಿಗೆ ನೀಡಬೇಕಾದ ಬಾಕಿ ಹಣ (Arrears) ಮತ್ತು ಬಾಟಾ ಸೇರಿದಂತೆ ಇತರೆ ಭತ್ಯೆಗಳ ಹೆಚ್ಚಳಕ್ಕೂ ನೌಕರರು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಸರ್ಕಾರ ಒಪ್ಪಿರುವ 1272 ಕೋಟಿ ರೂಪಾಯಿಯನ್ನು ಹಂತ ಹಂತವಾಗಿ ನೀಡುವ ಬದಲು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ನೌಕರರು ಪಟ್ಟು ಹಿಡಿದಿದ್ದಾರೆ.


ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ 26 ತಿಂಗಳ ವೇತನ ಬಾಕಿಗಾಗಿ ಈಗಾಗಲೇ ಹಣ ಬಿಡುಗಡೆ ಮಾಡಲು ಒಪ್ಪಿದ್ದೇವೆ, ಉಳಿದ ವಿಚಾರಗಳನ್ನು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇವೆ ಎಂದು ಭರವಸೆ ನೀಡಿದ್ದಾರಾದರೂ, ನೌಕರರು ಮಾತ್ರ ಸದ್ಯ ಬಣ್ಣದ ಮಾತುಗಳಿಗೆ ಮರುಳಾಗುವಂತೆ ಸದ್ಯ ಕಾಣ್ತಿಲ್ಲ. ನಮಗೆ ಭರವಸೆ ಬೇಡ, ಅಧಿಕೃತ ಆದೇಶ ಬೇಕು ಎಂದು ನೌಕರರ ಸಂಘಟನೆಗಳ ಮುಖಂಡರು ದೃಢವಾಗಿ ಹೇಳಿದ್ದಾರೆ. ಇದರಿಂದಾಗಿ ಸಂಧಾನದ ಬಾಗಿಲು ಸದ್ಯಕ್ಕೆ ಮುಚ್ಚಿದಂತಾಗಿದೆ.


ಸದ್ಯ ಈ ಬಿಕ್ಕಟ್ಟಿನಿಂದ ಸಾಮಾನ್ಯ ಜನರ ಮೇಲೆ ಪರಿಣಾಮ ಉಂಟಾಗಲಿದೆ. ಮೇ 20ರಿಂದ ಬಸ್‌ಗಳು ಬಂದ್ ಆದ್ರೆ ಕೆಲಸಕ್ಕೆ ಹೋಗುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ದೂರದ ಊರುಗಳಿಗೆ ಪ್ರಯಾಣಿಸುವವರು ಅಕ್ಷರಶಃ ಬೀದಿಗೆ ಬೀಳಲಿದ್ದಾರೆ. ಅದರಲ್ಲೂ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗಂತೂ ಈ ಮುಷ್ಕರ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮಧ್ಯಸ್ಥಿಕೆ ವಹಿಸದಿದ್ದರೆ ರಾಜ್ಯಾದ್ಯಂತ ಸಾರಿಗೆ ಕ್ರಾಂತಿ ಶುರುವಾಗೋದು ಗ್ಯಾರಂಟಿ.


ಒಟ್ಟಿನಲ್ಲಿ, ಮೇ 20ರ ಗಡುವು ಸರ್ಕಾರಕ್ಕೆ ನಡುಕ ಹುಟ್ಟಿಸುತ್ತಾ ಅಥವಾ ಸರ್ಕಾರ ಕೊನೆಯ ಕ್ಷಣದಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಮುಷ್ಕರವನ್ನ ಹತ್ತಿಕ್ಕುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಸದ್ಯಕ್ಕಂತೂ ಸಾರಿಗೆ ನೌಕರರು ಮಾಡು ಇಲ್ಲವೇ ಮಡಿ ಎಂಬ ಹೋರಾಟಕ್ಕೆ ಸಜ್ಜಾಗಿದ್ದಾರೆ.

- Advertisement -spot_img

More articles

- Advertisement -spot_img

Latest article